*ಸಿದ್ದಾಪುರ, ಆ. 1: ಸಮೀಪದ ವಾಲ್ನೂರು ತ್ಯಾಗತ್ತೂರಿನಲ್ಲಿ ರೈತರ ಕೃಷಿ ಗದ್ದೆಗೆ ನುಗ್ಗಿದ ಕಾಡಾನೆ ಹಿಂಡು ಭತ್ತದ ಪೈರು ತುಳಿದು ನಾಶಪಡಿಸಿದೆ. ಇದರಿಂದ ರೈತರು ಕಂಗಾಲಾಗಿ ಭಯಭೀತರಾಗಿದ್ದಾರೆ.

ಕಳೆದ 8 ದಿನಗಳಿಂದ ನಿರಂತರವಾಗಿ ರಾತ್ರಿಯಲ್ಲಿ ದುಬಾರೆ ಹಾಗೂ ಮೀನುಕೊಲ್ಲಿ ಅರಣ್ಯದಿಂದ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರೈತರ ಗದ್ದೆಯಲ್ಲಿ ಬೀಡು ಬಿಟ್ಟು ಪೈರುಗಳನ್ನು ತುಳಿದು ಸಂಪೂರ್ಣ ನಾಶಪಡಿಸಿವೆ.

ಮುಂಡ್ರುಮನೆ ಕುಟುಂಬಸ್ಥರು ಹಾಗೂ ಗ್ರಾಮದ ಕೆಲ ರೈತರಿಗೆ ಸೇರಿದ ಸುಮಾರು 25 ಏಕ್ರೆ ಕೃಷಿ ಗದ್ದೆಯಲ್ಲಿ ಕಾಡಾನೆ ದಾಂಧಲೆ ನಡೆಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ರೈತರು ಗದ್ದೆ ಕೃಷಿ ಮಾಡುವದನ್ನು ಕೈಬಿಟ್ಟಿದ್ದಾರೆ. ಕಾರ್ಮಿಕರ ಕೊರತೆ, ಮಳೆ ಅಭಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ಭೂಮಿ ಯನ್ನು ಪಾಳು ಬಿಡುವಂತಾಗಿದೆ. ಕೃಷಿ ಫಸಲನ್ನು ಅವಲಂಭಿತರಾಗಿರುವ ಸಣ್ಣ ರೈತರು ಕಾಡಾನೆ ಹಾವಳಿಯಿಂದ ಕಂಗಾಲಾಗಿದ್ದಾರೆ.

ಎಂ.ಎಂ. ಬಿದ್ದಪ್ಪ ಮಾತನಾಡಿ, 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಳೆದ 8 ದಿನಗಳಿಂದ ನಿರಂತರವಾಗಿ ಗದ್ದೆಗೆ ಬರುತ್ತಿವೆ. ಓಡಿಸಲು ಪ್ರಯತ್ನಪಟ್ಟರೆ ಇರುವ ಕೃಷಿಯನ್ನೆಲ್ಲಾ ತುಳಿದು ಹಾಳು ಮಾಡುತ್ತದೆ. ಕಾವೇರಿ ನದಿ ದಾಟಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ನಿರ್ಮಿಸಿದ ಸೋಲಾರ್ ಬೇಲಿಗಳನ್ನು ಧÀ್ವಂಸಗೊಳಿಸಿ ಬರುತ್ತಿವೆ.

ಕೃಷಿಕ ಮುಂಡ್ರುಮನೆ ಅಚ್ಚಯ್ಯ ಮಾತನಾಡಿ, ಮೀನುಕೊಲ್ಲಿ ಮತ್ತು ಮಾಲ್ದಾರೆ ಅರಣ್ಯಗಳಿಂದ ಆಗಮಿಸುವ ಆನೆಗಳು ಪ್ರತಿ ವರ್ಷ ಭತ್ತದ ನಾಟಿ ಸಂದರ್ಭ ಗದ್ದೆಗಳಿಗೆ ನುಗ್ಗಿ ಪೈರು ಮತ್ತು ಬೆಳೆ ನಾಶಪಡಿಸುತ್ತಿದೆ. ಅರಣ್ಯ ಇಲಾಖೆಗೆ ಎಷ್ಟೇ ಮನವಿ ಮಾಡಿದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಧುನಿಕತೆ ಹೆಸರಿನಲ್ಲಿ ಕೃಷಿ ಗದ್ದೆಗಳನ್ನು ಕಾಂಕ್ರೀಟ್ ಕಟ್ಟಡಗಳಾಗಿ ಮಾರ್ಪಡಿಸುತ್ತಿರುವಾಗ ಇರುವ ಕೃಷಿ ಭೂಮಿಯನ್ನು ಉಳಿಸುವ ಸಲುವಾಗಿ ನಾವು ಕೃಷಿ ಮಾಡುತ್ತಿದ್ದೇವೆ. ಆದರೆ ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಮಾಡಲು ಸಾಧÀ್ಯ ಆಗುತ್ತಿಲ್ಲ ಎಂದರು. ನೀರಿನ ಕೊರತೆ ಸಹ ನಮಗೆ ಉಂಟಾಗಿದ್ದು, ನೀರಾವರಿ ಇಲಾಖೆ ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುವ ಮೂಲಕ ಸಮಸ್ಯೆಗೆ ಸ್ಪಂದಿಸ ಬೇಕೆಂದರು. ಕೂಡಲೇ ಕಾಡಾನೆ ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ

ಈ ಸಂದರ್ಭ ಎಂ.ಕೆ ಗಿರೀಶ್, ಎಂ.ಎಂ ಆಲಪ್ಪ, ಎಂ.ಎ ಸುಧೀಶ್, ಎಂ.ಕೆ ಸುಜಯ್, ಬಿ.ಎಲ್ ದಾಮೋದರ್, ಬಿದ್ದಪ್ಪ, ಈರಪ್ಪ, ಉತ್ತಯ್ಯ, ರವಿ, ಇತರರು ಇದ್ದರು.