*ಸಿದ್ದಾಪುರ, ಅ. 20: ಅಣ್ಣ ಸಾವನ್ನಪ್ಪಿ ವಾರ ಕಳೆಯುವಷ್ಟರಲ್ಲಿ ತಮ್ಮನನ್ನೂ ವಿಧಿ ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿ ನಗರ ನಿವಾಸಿ ಅಮೆಮನೆ ಬೋಜಪ್ಪ (55) ಎಂಬವರು ಕಳೆದ ಗುರುವಾರ ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿರುವಾಗ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಅವರ ಸಹೋದರ ಸೋಮಯ್ಯ (47) ಎಂಬವರು ಜಿಗಣೆ ಕಡಿತದಿಂದ ಕಾಲು ಊತಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಸ್ಪತ್ರೆಯಿಂದ ಕರೆ ತರಲಾಗಿತ್ತು.
ಮಧುಮೇಹ ಇದ್ದ ಸೋಮಯ್ಯ ಅವರನ್ನು ಮತ್ತೆ ನಿನ್ನೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಊತಗೊಂಡು ಶಮನವಾಗದೆ ಇಂದು (ಗುರುವಾರ) ಸೋಮಯ್ಯ ಕೂಡ ಕೊನೆಯುಸಿರೆಳೆದರು. ಮುಂದಿನ ಸೋಮವಾರ ಬೋಜಪ್ಪ ಅವರ ತಿಥಿ ಕರ್ಮಾಂತರ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದ ಕುಟುಂಬಸ್ಥರಿಗೆ ಸೋಮಯ್ಯ ಅವರ ಸಾವು ಬರಸಿಡಿಲು ಬಡಿದಂತಾಗಿದೆ. ಮೊದಲೇ ದುಃಖದಲ್ಲಿ ಮುಳುಗಿದ್ದ ಕುಟುಂಬ ಇದೀಗ ದುಃಖ ಸಾಗರದಲ್ಲಿ ಮುಳುಗಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸಹೋದರರೊಬ್ಬರಾದ ರಾಮಣ್ಣ ಎಂಬವರ ಪುತ್ರನಿಗೆ ಜನಿಸಿದ ಹಸುಗೂಸು ಸಾವನ್ನಪ್ಪಿ ಆ ದುಃಖದ ಮಡುವಿನಿಂದ ಇನ್ನೂ ಯಾರೂ ಹೊರ ಬಂದಿರಲಿಲ್ಲ. ಅಷ್ಟರಲ್ಲೇ ಇದೀಗ ವಾರಾಂತ್ಯದೊಳಗಡೆ ಈರ್ವರು ಸಹೋದರರು ಇಹಲೋಕ ತ್ಯಜಿಸಿರುವದು ಕುಟುಂಬದ ಜಂಘಾಬಲವೇ ಹುದುಗಿ ಹೋದಂತಾಗಿದೆ.
ಇಷ್ಟೇ ಅಲ್ಲ..., ಮತ್ತೋರ್ವ ಸಹೋದರ ಮಾಚಯ್ಯ ಎಂಬವರು ಕೂಡ 2 ವರ್ಷದ ಹಿಂದೆ ಸಾವನ್ನಪ್ಪಿದ್ದರು. ‘ಗಾಯದ ಮೇಲೆ ಕೊಡಲಿ ಪೆಟ್ಟು’ ಎಂಬಂತೆ ಈ ಕುಟುಂಬದ ಮೇಲೆ ನೋವಿನ ಮೇಲೆ ನೋವಿನ ಬರೆ ಬೀಳುತ್ತಲೇ ಇದೆ. ಕುಟುಂಬದೊಂದಿಗೆ ಇಡೀ ಗ್ರಾಮವೇ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.
-ಅಂಚೆಮನೆ ಸುಧಿ