ಮಡಿಕೇರಿ, ಜ. 23: ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ವಾಯುಮಾಲಿನ್ಯವು ಸಹ ಅಧಿಕವಾಗುತ್ತಿದ್ದು, ವಾಯುಮಾಲಿನ್ಯ ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ದಿಸೆಯಲ್ಲಿ ವಾಹನಗಳ ತಪಾಸಣೆ ಕಡ್ಡಾಯವಾಗಿ ಆಗಬೇಕು ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ರಾದ ಮಾಸ್ಟರ್ ಆರ್‍ಕೆಜಿ.ಎಂಎಂ ಮಹಾಸ್ವಾಮೀಜಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರಿಗೆ ಇಲಾಖೆ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಾಹನಗಳ ವಾಯು ಮಾಲಿನ್ಯ ಮಾಪನ ಸಂಚಾರಿ ವಾಹನದ ಉದ್ಘಾಟನಾ ಕಾರ್ಯಕ್ರಮ ಮತ್ತು ತಪಾಸಣೆ ಮತ್ತು ಜಾಗೃತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಶುದ್ಧ ಗಾಳಿ, ಶುದ್ದ ನೀರು ಪಡೆಯುವಂತಾಗಲು ಮರ ಗಿಡಗಳು ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಅತ್ಯಗತ್ಯ. ಆದ್ದರಿಂದ ವಾಹನಗಳಿಂದ ಬಿಡುಗಡೆಯಾಗುವ ಅನಿಲ ಪರಿಸರಕ್ಕೆ ಸಮತೋಲನದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಪರಿಸರದಲ್ಲಿ ವಾಯುಮಾಲಿನ್ಯ ತಡೆಯಲು ಸಾಧ್ಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ವಾಹನಗಳಿಂದ ಬಿಡುಗಡೆ ಯಾಗುವ ಮಾಲಿನ್ಯದಿಂದ ಅನೇಕ ರೋಗಗಳು ಬರಲಿವೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ ವಾಯು ಮಾಲಿನ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸ ಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ಕರೆ ನೀಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ್ ಅವರು ಮಾತನಾಡಿ ಭೂಮಿಯಲ್ಲಿ ಶೇ.42ರಷ್ಟು ವಾಯುಮಾಲಿನ್ಯವು ವಾಹನದಿಂದ ಆಗುತ್ತದೆ. ಆದ್ದರಿಂದ ಈ ಬಗ್ಗೆ ವಿಶೇಷ ಗಮನಹರಿಸ ಬೇಕಿದೆ ಎಂದರು.

ಘನ ತ್ಯಾಜ್ಯಗಳ ವಿಲೇವಾರಿ, ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ನದಿ ಪಾತ್ರದಲ್ಲಿ ಕಲುಷಿತ ನೀರು ಸೇರಿದಂತೆ ಎಚ್ಚರಿಕೆ ವಹಿಸಬೇಕು ಎಂದು ಲಕ್ಷ್ಮಣ ಅವರು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾದ ಜೆ.ಜಿ.ಕಾವೇರಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಮೈಸೂರಿನ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮಾನಾಥ್, ಕಾವೇರಿ ನದಿ ಸ್ವಚ್ಛತೆ ಆಂದೋಲನದ ಸಂಚಾಲಕ ಎಂ. ಎನ್. ಚಂದ್ರಮೋಹನ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕರಾದ ಟಿ.ಜಿ.ಪ್ರೇಮ್ ಕುಮಾರ್ ಇತರರು ಇದ್ದರು. ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ವಂದಿಸಿದರು.