ಮಡಿಕೇರಿ, ಡಿ. 8: ತಾಲೂಕಿನ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯಕ್ರಮ ಇಂದು ನಗರದ ಶಿಶು ಕಲ್ಯಾಣ ಸಂಸ್ಥೆ ಆವರಣದಲ್ಲಿ ನೆರೆವೇರಿತು. ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ತಾವು ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಮತ್ತು ಸಾವಯವ ಗೊಬ್ಬರ ಬಳಸಿ ಬೆಳೆಸಿದ ಸೊಪ್ಪು, ತರಕಾರಿ, ಹಣ್ಣುಗಳು, ಹುತ್ತರಿಗೆಣಸುಗಳನ್ನು ಮಾರಾಟ ಮಾಡಿದರು. ತಾ.ಪಂ. ಅಧ್ಯಕ್ಷೆ ಶೋಭ ಅವರು ಅಧ್ಯಕ್ಷತೆಯನ್ನು ವಹಿಸಿ ಇಲಾಖೆಯ ಎಲ್ಲಾ ಸವಲತ್ತುಗಳನ್ನು, ತರಬೇತಿಗಳನ್ನು ಪಡೆದು ಮಹಿಳೆಯರು ಉತ್ತಮ ರೀತಿಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಲು ಕರೆ ನೀಡಿದರು. ಉದ್ಘಾಟನೆಯನ್ನು ತಾ.ಪಂ. ಉಪಾಧ್ಯಕ್ಷೆ ಬೊಳಿಯಾಡಿರ ಸಂತು ಸುಬ್ರಮಣಿ ಅವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ತಾಲೂಕು ಪಂಚಾಯತ್ ಸದಸ್ಯರಾದ ಕುಮುದ, ಉಮಾಪ್ರಭು, ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಕವಿತ, ಕೊಡಿಯಂಡ ಇಂದಿರಾ, ಮಮ್ತಾಜ್ ಎಂ.ಹೆಚ್. ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ಉಪಸ್ಥಿತರಿದ್ದರು.
ಆದಾಯೋತ್ಪನ್ನದ ಜೊತೆಗೆ ಗ್ರಾಮದ ಮಹಿಳೆಯರು ತೊಂದರೆಗೊಳಪಟ್ಟಾಗ ಎಲ್ಲಾ ಮಹಿಳೆಯರು ಒಗೂಡಿ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಲು ಉಪನಿರ್ದೇಶಕರಾದ ಮಮ್ತಾಜ್ ಅವರು ಎಲ್ಲಾ ಮಹಿಳೆಯರಿಗೆ ಕಿವಿ ಮಾತು ಹೇಳಿದರು. ಎನ್.ಎಸ್. ರುಕ್ಮಿಣಿ ಪ್ರಾರ್ಥಿಸಿ, ಸ್ವಾಗತ ಮತ್ತು ಪ್ರಸ್ತಾವಿಕ ಎ.ಎಂ. ದಮಯಂತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಂದಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ನಿರೂಪಿಸಿದರು.