ಕುಶಾಲನಗರ, ಡಿ. 8: ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದ ಘಟಕವೊಂದರಲ್ಲಿ ನಡೆದ ಅಧಿಕಾರಿಯೊಬ್ಬರ ಮಾಮೂಲಿ ವಸೂಲಿ ಪ್ರಕರಣದ ತನಿಖೆ ಬಿರುಸಿನಿಂದ ನಡೆಯುತ್ತಿದೆ.

ಕಳೆದ ಅಕ್ಟೋಬರ್ ಅಂತ್ಯದಲ್ಲಿ ಅಧಿಕಾರಿಯೊಬ್ಬರು ಮಾಮೂಲಿ ಪಡೆದ ದೃಶ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಅಧಿಕಾರಿಗಳ, ಜನಪ್ರತಿನಿಧಿಗಳ ವಿಶೇಷ ತನಿಖಾ ತಂಡವೊಂದು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದೆ. ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ನೇತೃತ್ವದ ತನಿಖಾ ತಂಡ ಘಟಕಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.

ಘಟಕದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರದ ದೃಶ್ಯಾವಳಿಗಳು ಸೇರಿದಂತೆ ಸಂಸ್ಥೆಯ ಸದಸ್ಯರಿಂದ ಪ್ರತ್ಯೇಕ ವರದಿ ಸಂಗ್ರಹಿಸಲಾಗಿದೆ. ಬಹುತೇಕ ದಾಖಲೆಗಳನ್ನು ವಶಪಡಿಸಿಕೊಂಡಿರುವ ತನಿಖಾ ತಂಡ ತಾ. 9 ರಂದು (ಇಂದು) ಸಭೆ ಸೇರಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ.

ಮಾಮೂಲಿ ಪಡೆದ ಅಧಿಕಾರಿ ಪತ್ರಿಕೆಯಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮೈಸೂರಿಗೆ ವರ್ಗಾವಣೆ ಯಾಗಿದ್ದು ತನಿಖಾ ತಂಡದ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಮೂಲದ ಪ್ರಕಾರ ಅಧಿಕಾರಿಯೊಬ್ಬರು ಮಾಮೂಲಿ ಪಡೆಯುವ ಸಂದರ್ಭ ಸಿಸಿ ಕ್ಯಾಮೆರದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಡಿಲೀಟ್ ಮಾಡುವಲ್ಲಿ ಕಾಣದ ಕೈಗಳು ಯಶಸ್ವಿ ಯಾಗಿದ್ದರೂ ಈ ದೃಶ್ಯಾವಳಿಗಳನ್ನು ಕೆಲವು ಪರಿಣಿತರು ಪೆನ್‍ಡ್ರೈವ್‍ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

ಕೂಡ್ಲೂರು ಕೈಗಾರಿಕಾ ಬಡಾವಣೆ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದಿಂದ ಮಾಮೂಲಿ ವಸೂಲಿ ದಂಧೆಯ ಪ್ರಮುಖರು ಪ್ರತೀ ತಿಂಗಳು 1 ಲಕ್ಷ ರೂ.ಗಳಿಗೂ ಅಧಿಕ ಮಾಮೂಲಿ ಪಡೆಯುತ್ತಿದ್ದರು ಎನ್ನುವ ಮಾಹಿತಿ ತನಿಖಾ ತಂಡಕ್ಕೆ ದೊರೆತಿದ್ದು ಇನ್ನೂ ಹೆಚ್ಚಿನ ತನಿಖೆ ನಡೆದಲ್ಲಿ ಭಾರೀ ಗೋಲ್‍ಮಾಲ್ ಹೊರ ಬೀಳುವದಂತೂ ಖಚಿತ ಎನ್ನಲಾಗಿದೆ.

- ಚಂದ್ರಮೋಹನ್