ಮಡಿಕೇರಿ, ಡಿ. 11: ಜಿಲ್ಲೆಯ ಮೂಲ ನಿವಾಸಿ ಬುಡಕಟ್ಟು ಕುಟುಂಬಗಳಿಗೆ ವಸತಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಐಟಿಡಿಪಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಯರವ ಮತ್ತು ಸೋಲಿಗ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೀರಾಜಪೇಟೆ ತಾಲೂಕಿಗೆ ನಿಗದಿಯಾಗಿರುವ ವಸತಿ ಯೋಜನೆಗಳನ್ನು ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗ ಬೇಕು. ಸೋಮವಾರಪೇಟೆ ತಾಲೂಕಿನಲ್ಲಿ ವಸತಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಮತ್ತೊಮ್ಮೆ ಪರಿಶಿಷ್ಟ ವರ್ಗಗಳ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಸ್ಪಷ್ಟನೆ ಪಡೆಯುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ತಿಳಿಸಿದರು.

ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ಎಸ್.ಎನ್. ರಾಜಾರಾವ್ ಮಾತನಾಡಿ ಲ್ಯಾಂಪ್ ಸೊಸೈಟಿ ಮೂಲಕ ವಸತಿ ಯೋಜನೆಗಳನ್ನು ಕೈಗೊಳ್ಳಲು ಅವಕಾಶ ಮಾಡುವಂತೆ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಫಲಾನುಭವಿಗಳ ಖಾತೆಗೆ ವಸತಿ ಯೋಜನೆಗಳ ಚೆಕ್‍ಗಳು ಜಮೆಯಾಗುವದರಿಂದ ಸೊಸೈಟಿ ವತಿಯಿಂದ ವಸತಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಂದ ಸ್ಪಷ್ಟನೆ ಪಡೆಯುವಂತೆ ತಿಳಿಸಿದರು.

ತಿತಿಮತಿ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಜೆ.ಕೆ. ರಾಮು ಅವರು ಮಾತನಾಡಿ ವೀರಾಜಪೇಟೆ ತಾಲೂಕಿನಲ್ಲಿ ಫಲಾನುಭವಿಗಳೇ ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದು, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದು ತಿಳಿಸಿದರು.

ಹಾಡಿಗಳಲ್ಲಿ ವಾಸಿಸುವ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಪ್ರಗತಿ ಸಾಧಿಸುವದರ ಜೊತೆಗೆ ಹಾಡಿಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ವಾಸ್ತವಾಂಶ ತಿಳಿದು ಗಿರಿಜನರ ನೆರವಿಗೆ ಧಾವಿಸಬೇಕು ಜಿಲ್ಲಾಧಿಕಾರಿ ಡಿಸೋಜ ಅವರು ಸಲಹೆ ಮಾಡಿದರು.

ಹಾಡಿಗಳಲ್ಲಿ ನೆಲೆಸಿರುವ ಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಮನೆ, ನೀರು, ರಸ್ತೆ ಕಾಮಗಾರಿಗಳು ಸೇರಿದಂತೆ ಇಲಾಖೆ ಮಟ್ಟದಲ್ಲಿ ದೊರೆಯುವ ವೃತ್ತಿ ನೈಪುಣ್ಯ ತರಬೇತಿಯ ಸೌಲಭ್ಯಗಳು ಹಾಡಿಯ ಹೆಚ್ಚು ಫಲಾನುಭವಿಗಳಿಗೆ ಸಿಗುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಭಾಗಮಂಡಲ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಕುಮಾರ, ಐಟಿಡಿಪಿ ಇಲಾಖಾ ಅಧಿಕಾರಿ ಮಾಯಾದೇವಿ ಗಲಗಲಿ, ಜಿ.ಪಂ. ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಧಿಕಾರಿ ಮಮ್ತಾಜ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ವೀರಾಜಪೇಟೆ ತಾಲೂಕು ಐಟಿಡಿಪಿ ಇಲಾಖೆ ಅಧಿಕಾರಿ ಚಂದ್ರಶೇಖರ್ ಇತರರು ಹಲವು ಮಾಹಿತಿ ನೀಡಿದರು.