ಮಡಿಕೇರಿ, ಆ.10: ಅತಿ ಹೆಚ್ಚು ಕಾಫಿ ತೋಟಗಳ ಪ್ರದೇಶವನ್ನು ಹೊಂದಿರುವ ಕೊಡಗು ಜಿಲ್ಲೆಯನ್ನು ಕಾರ್ಮಿಕರ ಕೊರತೆ ಕಾಡುತ್ತಿರುವ ಬೆನ್ನಲ್ಲೇ ತೋಟದ ಕೆಲಸ ಹುಡುಕಿಕೊಂಡು ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಆಗಮಿಸುತ್ತಿರುವ ಅಪರಿಚಿತ ಕಾರ್ಮಿಕ ಸಮೂಹ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುವ ಆತಂಕ ಸೃಷ್ಟಿಯಾಗಿದೆ.
ಕೆಲವು ಸಂಘ ಸಂಸ್ಥೆಗಳು ಮಾಡಿರುವ ಸಮೀಕ್ಷೆಯಂತೆ ಈಗಾಗಲೇ ಜಿಲ್ಲೆಯನ್ನು ಸುಮಾರು 40 ಸಾವಿರ ವಲಸಿಗರು ಪ್ರವೇಶಿಸಿದ್ದಾರೆ. ಕಾರ್ಮಿಕರ ಕೊರತೆಯಿಂದ ಬೇಸತ್ತಿದ್ದ ತೋಟದ ಮಾಲೀಕರು ಈ ವಲಸೆ ಕಾರ್ಮಿಕರು ವರದಾನವೆಂದು ತಿಳಿದು ಎಲ್ಲರನ್ನು ಬರ ಮಾಡಿಕೊಂಡರು. ಕೊಡಗಿನ ತೋಟಗಳಲ್ಲಿ ದುಡಿದರೆ ಸಿಗಬಹುದಾದ ಸವಲತ್ತುಗಳ ಬಗ್ಗೆ ಆಕರ್ಷಿತರಾಗಿರುವ ವಲಸಿಗರು ಜಿಲ್ಲೆಯ ವಿವಿಧೆಡೆ ನೆಲೆ ನಿಂತ್ತಿದ್ದಾರೆ. ಅಸ್ಸಾಂ ನಿಂದ ನೇರವಾಗಿ ಬರುತ್ತಿರುವ ಈ ವಲಸೆ ಕಾರ್ಮಿಕರು ಮೂಲತಃ ಅಸ್ಸಾಮಿನವರೇ ಅಥವಾ ಬಾಂಗ್ಲಾದಿಂದ ಬಂದು ಅಸ್ಸಾಂನಲ್ಲಿ ನಕಲಿ ಗುರುತಿನ ಚೀಟಿ ಪಡೆದು ಹೊಟ್ಟೆಪಾಡಿಗಾಗಿ ಕೊಡಗನ್ನು ಪ್ರವೇಶಿಸುತ್ತಿದ್ದಾರೆಯೇ ಎನ್ನುವ ಸಂಶಯ ಸ್ಥಳೀಯರನ್ನು ಕಾಡುತ್ತಿದೆ.
ಅಸ್ಸಾಂನಲ್ಲಿ ನಕಲಿ ಗುರುತಿನ ಚೀಟಿ ದಂಧೆ ನಡೆಯುತ್ತಿರುವದರಿಂದ ಅಲ್ಲಿನ ನಕಲಿ ಚೀಟಿ ಪಡೆದು ಕೊಡಗಿನ ತೋಟದ ಮಾಲೀಕರನ್ನು ನಂಬಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಜಿಲ್ಲೆಯ ತೋಟದ ಮಾಲೀಕರು ಸಹಜವಾಗಿಯೇ ವಲಸೆ ಕಾರ್ಮಿಕರನ್ನು ಬರ ಮಾಡಿ ಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಈ ವಲಸಿಗರ ಬಗ್ಗೆ ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ ಸುರಕ್ಷತೆಯ ದೃಷ್ಟಿಯಿಂದ ಕಾರ್ಮಿಕರ ಗುರುತಿನ ಚೀಟಿ, ಪಡಿತರ ಚೀಟಿ, ಭಾವಚಿತ್ರ ಹಾಗೂ ಖಾಯಂ ವಿಳಾಸದ ಸಂಪೂರ್ಣ ಮಾಹಿತಿಯನ್ನು ಪಡೆದು ಪೊಲೀಸ್ ಇಲಾಖೆಗೂ ನೀಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ಕಾರ್ಮಿಕರ ನಿರೀಕ್ಷೆಯನ್ನು ಮಾತ್ರ ಹೊಂದಿದ್ದ ಬಹುತೇಕ ತೋಟದ ಮಾಲೀಕರು ವಲಸೆ ಕಾರ್ಮಿಕರ ದಾಖಲಾತಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ದುಡಿಸಿಕೊಂಡಿದ್ದಾರೆ. ತಮ್ಮ ಲೈನ್ಮನೆಗಳಲ್ಲಿ ಆಶ್ರಯವನ್ನೂ ನೀಡಿದ್ದಾರೆ. ಈ ಮನೆಗಳಲ್ಲಿ ಕುಟುಂಬ ಸಹಿತರಾಗಿ ವಾಸವಾಗಿರುವ ವಲಸೆ ಕಾರ್ಮಿಕರು ಶುಚಿತ್ವಕ್ಕೆ ಆದ್ಯತೆ ನೀಡದೆ ಇರುವದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ಎಐಟಿಯುಸಿ ಸಂಘಟನೆ ವ್ಯಕ್ತಪಡಿಸಿದೆ.
ಕೊಡಗು ಬಂದ್ ಎಚ್ಚರಿಕೆ
ಅಸ್ಸಾಂ ಹಾಗೂ ಬಾಂಗ್ಲಾದಿಂದ ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕ ಬಳಿ ಆಧಾರ್ ಕಾರ್ಡ್ ಇದೆ, ಮತದಾರರ ನಕಲಿ ಗುರುತಿನ ಚೀಟಿ ಇದೆ, ಬಿಪಿಎಲ್ ಪಡಿತರ ಚೀಟಿಯೂ ಲಭಿಸಿದೆ. ಇಲ್ಲಿನ ಪೌರತ್ವ ಮತ್ತು ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ನಕಲಿ ದಾಖಲೆಗಳ ಮೂಲಕ ಇಲ್ಲಿ ತಳವೂರುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಇದೇ ನಕಲಿ ದಾಖಲೆಗಳ ಮೂಲಕ ದಾಖಲಾತಿ ಮಾಡಿ ಸರಕಾರದ ಸೌಲಭ್ಯ ಪಡೆಯಲಾಗುತ್ತಿದೆ. ಹಣಕ್ಕಾಗಿ ಅಧಿಕಾರಿಗಳು ಕೂಡ ವಲಸೆ ಕಾರ್ಮಿಕರ ಬೆಂಬಲಕ್ಕೆ ನಿಂತು ನಕಲಿ ದಾಖಲೆಗಳನ್ನು ನೀಡುತ್ತಿರುವ ಸಂಶಯವಿದೆ ಎಂದು ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೊಮಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೋಟಗಳಲ್ಲಿ ಮಾತ್ರವಲ್ಲದೆ ಹೋಟೆಲ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲೂ ವಲಸಿಗರನ್ನು ದುಡಿಸಿಕೊಳ್ಳಲಾಗುತ್ತಿದ್ದು, ಅಪರಿಚಿತರಿಂದ ಮುಂದೊಂದು ದಿನ ಶಾಂತಿಯುತ ಕೊಡಗಿಗೆ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿಂದೆಯೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿ ವಲಸಿಗರ ಬಗ್ಗೆ ಮಾಹಿತಿ ಪಡೆಯುವಂತೆ ಮನವಿ ಮಾಡಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ವಲಸೆ ಬರುತ್ತಿರುವ ಕಾರ್ಮಿಕರಿಂದಾಗಿ ಕೊಡಗಿನ ಕಾರ್ಮಿಕರಿಗೂ ಕಷ್ಟ ನಷ್ಟಗಳು ಉಂಟಾಗುತ್ತಿದೆ. ಮುಂದೊಂದು ದಿನ ಸಮಾಜ ಘಾತುಕ ಚಟುವಟಿಕೆಗಳೂ ನಡೆಯುವ ಸಂಭವಿದೆ.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಕೂಡ ಯಾವದೇ ಸಮೀಕ್ಷೆಗಳನ್ನು ಮಾಡದೆ ನಿರ್ಲಕ್ಷ್ಯ ವಹಿಸಿದೆ. ಕೊಡಗಿನ ಹಿತದೃಷ್ಟಿಯಿಂದ ಮುಂದಿನ ಒಂದು ತಿಂಗಳೊಳಗೆ ವಲಸೆ ಕಾರ್ಮಿಕರ ಸಂಪೂರ್ಣ ಮಾಹಿತಿ ಮತ್ತು ಮೂಲ ಸ್ಥಳದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿದ್ದಲ್ಲಿ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಸಂಘಟಿತರಾಗಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ ಹೆಚ್.ಎಂ.ಸೊಮಪ್ಪ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಕೊಡಗು ಬಂದ್ಗೆ ಕರೆ ನೀಡುವದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೇಮಾವತಿ, ಹಬೀಬ, ಪುಷ್ಪ, ಧನಂಜಯ್ ಹಾಗೂ ಬಾಬು ಉಪಸ್ಥಿತರಿದ್ದರು.