ಕೂಡಿಗೆ, ಆ. 15: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಮುಳ್ಳುಸೋಗೆ, ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ ಗ್ರಾಮಗಳಲ್ಲಿ ಶ್ರಾವಣ ಮಾಸದ ಶುಕ್ರವಾರದಂದು ವರಮಹಾಲಕ್ಷ್ಮಿಯ ಪೂಜೆಯನ್ನು ಮಹಿಳೆಯರು ಸಡಗರ-ಸಂಭ್ರಮ ದಿಂದ ಆಚರಣೆ ಮಾಡಿದರು. ಮಹಿಳೆಯರು ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸುವದರ ಜೊತೆಗೆ, ಹೊಸ ಉಡುಗೆ ತೊಡುಗೆ ತೊಟ್ಟು, ವಿಶೇಷ ಸಿಹಿ ಭೋಜನವನ್ನು ತಯಾರಿಸಿ, ಮನೆಯಲ್ಲಿ ಲಕ್ಷ್ಮೀಯನ್ನು ಸಿಂಗರಿಸಿ ಪೂಜೆಯನ್ನು ನೆರವೇರಿಸಿದರು. ನಂತರ ಇಡೀ ಗ್ರಾಮದ ಮುತ್ತೈದೆಯ ರನ್ನು ತಮ್ಮ ಮನೆಗೆ ಆಹ್ವಾನಿಸಿ ಅರಿಶಿಣ ಕುಂಕುಮ, ಬಳೆ- ತಾಂಬೂಲ ನೀಡಿ ಶುಭ ಹಾರೈಸಿಕೊಳ್ಳುವದರ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು.
ಸ್ಥಳೀಯ ದೇವಸ್ಥಾನಗಳಾದ ಶ್ರೀ ಉದ್ಭವ ಸುಬ್ರಮಣ್ಯ ದೇವಾಲಯ, ಬಸವೇಶ್ವರ ದೇವಾಲಯ, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ, ಹೆಬ್ಬಾಲೆಯ ಶ್ರೀ ಬನಶಂಕರಿ ಅಮ್ಮನವರ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಲಕ್ಷ್ಮೀ ಪೂಜೆಯ ಪ್ರಸಾದವನ್ನು ಸ್ವೀಕರಿಸಿದರು.