ಕುಶಾಲನಗರ, ಆ. 27: ಚನ್ನರಾಯಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಗಳು ನ್ಯಾಯಾಧೀಶರನ್ನು ದಿಗ್ಬಂಧನಕ್ಕೆ ಒಳಪಡಿಸಿದ ಪ್ರಕರಣವನ್ನು ಖಂಡಿಸಿ ಕುಶಾಲನಗರ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಚನ್ನರಾಯಪಟ್ಟಣದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಶಶಿಕಲಾ ಪೊಲೀಸ್ ಅಧಿಕಾರಿಯೊಬ್ಬರನ್ನು ನ್ಯಾಯಾಂಗ ವಶಕ್ಕೆ ಆದೇಶಿಸಿದ ಸಂದರ್ಭ ಅವರ ಆದೇಶವನ್ನು ಧಿಕ್ಕರಿಸಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ದಿಗ್ಬಂಧನ ಒಡ್ಡಿದ ಪ್ರಕರಣವನ್ನು ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಹೊರ ನಡೆದ ವಕೀಲರು ಪೊಲೀಸರ ವರ್ತನೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟರಮಣ ರಾವ್ ಮತ್ತು ಕಾರ್ಯದರ್ಶಿ ಕೆ.ಬಿ. ಮೋಹನ್, ಚನ್ನರಾಯಪಟ್ಟಣದಲ್ಲಿ ನಡೆದ ಪ್ರಕರಣ ಖಂಡಿಸಿ ಇಂದು ನ್ಯಾಯಾಲಯ ಕಲಾಪ ಬಹಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ಸಂತೋಷ್ ಕುಮಾರ್, ಎಸ್.ಎಸ್. ಪಾಲಾಕ್ಷ, ಶಿವಮೂರ್ತಿ, ರಾಘವೇಂದ್ರ, ಪದ್ಮನಾಭ, ಮನೋಹರ್, ಸವಿತಾ, ಶಿರಿ ಇದ್ದರು.