ಕುಶಾಲನಗರ, ಸೆ. 23 : ಪಾದಚಾರಿ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ. ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಕೊಕ್ಕೇರ ತಮ್ಮಯ್ಯ (68) ಮೃತಪಟ್ಟವರು.

ಕುಶಾಲನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ವೇಗವಾಗಿ ಬಂದ ಮಿನಿಲಾರಿ (ಕೆ.ಎ 12 ಎ 553) ಡಿಕ್ಕಿಯಾಗಿ ಗಾಯಗೊಂಡ ತಮ್ಮಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿರುವದಾಗಿ ಕುಶಾಲನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ತಮ್ಮಯ್ಯ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದು, ಮುಳ್ಳುಸೋಗೆಯಲ್ಲಿ ನೆಲೆಸಿದ್ದರು. ಹೆಗ್ಗಡೆ ಸಮಾಜದ ಅಧ್ಯಕ್ಷರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 24 ರಂದು (ಇಂದು) ಕುಶಾಲನಗರದಲ್ಲಿ ನಡೆಯಲಿದೆ.ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಯೋಗೇಶ್ ಎಂಬಾತನನ್ನು ಬಂಧಿಸಲಾಗಿದೆ.