ಕುಶಾಲನಗರ, ಆ. 3: ದ್ವಿಚಕ್ರ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಗುಡ್ಡೆಹೊಸೂರು ಬಳಿ ನಡೆದಿದೆ.

7ನೇ ಹೊಸಕೋಟೆ ಪೈಸಾರಿ ನಿವಾಸಿ ಬಾಬು ಅವರ ಪುತ್ರ ದಯಾನಂದ (26) ಮೃತ ಯುವಕ. ಕುಶಾಲನಗರದಿಂದ ಸ್ಕೂಟಿಯಲ್ಲಿ (ಕೆಎ.54.ಹೆಚ್.2804) ತೆರಳುತ್ತಿದ್ದ ದಯಾನಂದ ಚಾಲಿಸುತ್ತಿದ್ದ ಸ್ಕೂಟಿ ಗುಡ್ಡೆಹೊಸೂರು ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಬಂದ ಟಿಂಬರ್ ತುಂಬಿದ ಲಾರಿಗೆ (ಕೆಎ.16.ಎ.6473) ಡಿಕ್ಕಿಯಾಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯವುಂಟಾದ ಪರಿಣಾಮ ತೀವ್ರ ರಕ್ತಸ್ರಾವದಿಂದ ದಯಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮೃತ ದಯಾನಂದ ಕುಶಾಲನಗರದಿಂದ ಗುಡ್ಡೆಹೊಸೂರು ನಡುವೆ ಎರಡು ಬಾರಿ ಸ್ಕೂಟಿಯಿಂದ ಕೆಳಗೆ ಬಿದ್ದಿರುವ ಬಗ್ಗೆ ಮಾಹಿತಿ ದೊರಕಿರುವದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.