ಸೋಮವಾರಪೇಟೆ, ಅ. 9: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿಗೆ ರೂ. 32,24,617 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಹೇಳಿದರು.
ಗೌಡಳ್ಳಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2016-17ನೇ ಸಾಲಿನ ಬಜೆಟ್ನಲ್ಲಿ ರೂ. 1,32,40,000 ಆದಾಯ ಗುರಿ, ರೂ. 1,11,85,000 ಖರ್ಚು, ರೂ. 20,55,000 ನಿವ್ವಳ ಲಾಭಾಂಶವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಸಹಕಾರ ಸಂಘದಲ್ಲಿ 1855 ಸದಸ್ಯರಿದ್ದು, ರೂ. 1.53 ಕೋಟಿ ಪಾಲು ಬಂಡವಾಳವಿದೆ. ಪ್ರಸಕ್ತ ವರ್ಷ ಶೇ. 12 ರಂತೆ ಸದಸ್ಯರಿಗೆ ಡಿವಿಡೆಂಡ್ ನೀಡಲಾಗುವದು. ಸಂಘದ ಸದಸ್ಯರಿಗೆ ರೂ. 1.93.69.000 ಸಾಲ ವಿತರಿಸ ಲಾಗಿದ್ದು, ರೂ. 1.92.54.700 ಸಾಲ ವಸೂಲಾತಿಯಾಗಿದ್ದು, ಶೇ. 99.41 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಸಂಘದಲ್ಲಿ 1642 ಮಂದಿ ಯಶಸ್ವಿನಿಯಲ್ಲಿ ನೋಂದಾಯಿತ ರಾಗಿದ್ದಾರೆ. ಸಂಘದ 2 ಮಾರಾಟ ಮಳಿಗೆಗಳಲ್ಲಿ ಗೊಬ್ಬರ ಹಾಗೂ ದಿನಬಳಕೆಯ ವಸ್ತುಗಳು ಹಾಗೂ ಪಡಿತರಗಳನ್ನು ವಿತರಿಸಲಾಗುತ್ತಿದೆ.
ಸದಸ್ಯರ ಹಿತದೃಷ್ಟಿಯಿಂದ ಕಡಿಮೆ ದರದಲ್ಲಿ ಚಿನ್ನಾಭರಣ ಸಾಲ, ಗೊಬ್ಬರ ಸಾಲ, ಜಾಮೀನು ಸಾಲ, ಪಿಗ್ಮಿ ಠೇವಣಿ ಆಧಾರಿತ ಸಾಲ ಹಾಗೂ ವ್ಯಾಪಾರಾಭಿವೃದ್ಧಿ ಸಾಲವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕರು ಗಳಾದ ಕೆ.ಟಿ. ಕಾವೇರಿ, ಸಿ.ಎ. ಮಮತ, ಜಿ.ಜೆ. ಪವಿತ್ರ, ಎಸ್.ಆರ್. ಷಡಕ್ಷರಿ, ಎಸ್.ಎ. ಸುರೇಶ್, ಜಿ.ಎ. ಮಹೇಶ್, ಜಿ.ಪಿ. ಸುನಿಲ್ ಕುಮಾರ್, ಎಸ್.ಕೆ. ಕೃಷ್ಣ, ಹೆಚ್.ಎಂ. ಚಂದ್ರಶೇಖರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ಪರಮೇಶ್, ಲೆಕ್ಕಿಗರಾದ ಕೆ.ಕೆ. ಶಿವಪ್ರಕಾಶ್ ಉಪಸ್ಥಿತರಿದ್ದರು.