ಮಡಿಕೇರಿ, ಅ. 26 - ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು ರೋಟರಿ ಕ್ಲಬ್ ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಪ್ರಮುಖ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ರೋಟರಿ 3181 ಜಿಲ್ಲೆಯ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ್ ಹೇಳಿದ್ದಾರೆ. ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಗೆ ರೋಟರಿ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಆರ್.ಎಸ್.ನಾಗಾರ್ಜುನ್, ರೋಟರಿ ಮಿಸ್ಟಿ ಹಿಲ್ಸ್ ನ ಸಾಧನೆಗಳ ಸಾಲು ಮಿಸ್ಟಿ ಹಿಲ್ಸ್‍ನ್ನು ಮಾದರಿ ಕ್ಲಬ್ ಎಂದು ಪರಿಗಣಿಸುವಂಥಹ ಭಾವನೆಗೆ ಕಾರಣವಾಗಿದೆ ಎಂದು ಶ್ಲಾಘಿಸಿದರು. 12 ವರ್ಷದ ಕ್ಲಬ್ ತನ್ನ ನಿರೀಕ್ಷೆಗೂ ಮೀರಿ ಅತ್ಯುತ್ತಮ ಸೇವಾ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಪದಾಧಿಕಾರಿಗಳನ್ನು ಶ್ಲಾಘಿಸಿದರು.

ಭಾರತೀಯರು ಹೊಸ ವಿಭಿನ್ನ ಶೈಲಿಯ ಆವಿಷ್ಕಾರಗಳನ್ನು ಮಾಡುವಲ್ಲಿ ನಿಪುಣರಾಗಿದ್ದೇವೆ ಎಂದು ಹೇಳಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ತೆಗೆದು ಹಾಕಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು. ರೋಟರಿ ಕ್ಲಬ್‍ಗಳು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸಮಾಜದ ಆಶಾಕಿರಣವಾಗಿ ಮುನ್ನಡಿಯಿಟ್ಟಿದೆ ಎಂದೂ ನಾಗಾರ್ಜುನ ಹೇಳಿದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಸಿ.ಆರ್. ಪ್ರಶಾಂತ್ ಮಾತನಾಡಿ , ಅಕ್ಟೋಬರ್ ತಿಂಗಳಿ ನಲ್ಲಿ ಆರ್ಥಿಕ ಮತ್ತು ಸಮುದಾಯ ಸಬಲೀಕರಣ ಮಾಸವಾಗಿ ಆಚರಿಸಲಾಗುತ್ತಿದ್ದು, ‘ನಮ್ಮ ಹಳ್ಳಿ’ ಎಂಬ ಯೋಜನೆಯನ್ನು ಜಿಲ್ಲಾ ರೋಟರಿಯಿಂದ ರೂಪಿಸಲಾಗಿದೆ. ಈ ಯೋಜನೆಯಡಿ ಅಭಿವೃದ್ಧಿ ವಂಚಿತ ಹಳ್ಳಿಯನ್ನು ದತ್ತು ತೆಗೆದುಕೊಂಡು ಆ ಹಳ್ಳಿಯಲ್ಲಿ ಸಮುದಾಯ ಸೇವಾ ಕಾರ್ಯಯೋಜನೆಗಳ ಮೂಲಕ ಹಳ್ಳಿ ಜನರ ಜೀವನ ಮಟ್ಟ ಸುಧಾರಿಸಲು ಉದ್ದೇಶಿಸಲಾಗಿದೆ. ನಮ್ಮ ಹಳ್ಳಿ ಯೋಜನೆಯಿಂದ ಗ್ರಾಮೀಣ ಜನರಿಗೆ ಸೂಕ್ತ ಸೌಲಭ್ಯ ನೀಡಲು ಈಗಾಗಲೇ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್‍ನ ವಲಯಾಧ್ಯಕ್ಷ ಪಾರ್ಥ ಚಂಗಪ್ಪ ಕ್ಲಬ್ ರೋಸ್ಟರ್‍ನ್ನು ಅನಾವರಣಗೊಳಿಸಿದರು. ಸಹಾಯಕ ರಾಜ್ಯಪಾಲ ಡಾ. ಸಿ. ಆರ್. ಪ್ರಶಾಂತ್, ರೋಟರಿಯ ಸುದ್ದಿಸಂಚಿಕೆ ಬಿಡುಗಡೆಗೊಳಿಸಿದರು.

ಗ್ರಾಮೀಣ ಪ್ರದೇಶದಲ್ಲಿನ ಸವಾಲುಗಳನ್ನು ಎದುರಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆಯ ಪಥದಲ್ಲಿ ಕೊಂಡೊಯ್ಯುತ್ತಿರುವ ಚೆಂಬು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ದೇಚಮ್ಮ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಶಿಕಲಾ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಡಿಕೇರಿಯ ಆದಮ್ ಅಂಡ್ ಸನ್ಸ್ ಸಂಸ್ಥೆಯ ಮುಖ್ಯಸ್ಥ ಅಬ್ರಾರ್ ಅವರು ಗಳನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ನವೀನ್, ಮಿಸ್ಟಿ ಹಿಲ್ಸ್‍ನ ಮುಂದಿನ ಸಾಲಿನ ಅಧ್ಯಕ್ಷ ಅನಿಲ್ ಹೆಚ್. ಟಿ., ಸುಧಾ ನಾಗಾರ್ಜುನ ವೇದಿಕೆಯಲ್ಲಿದ್ದರು. ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಜಿ.ಆರ್.ರವಿಶಂಕರ್, ಕೆ.ಕೆ.ವಿಶ್ವನಾಥ್,

ಎ. ಗೋಪಾಲಕೃಷ್ಣ, ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ರೋಟರಿಯ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.