ಶ್ರೀಮಂಗಲ, ಅ. 19: ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ದೊರೆಯದಿದ್ದಾಗ ರೈತರೇ ಸೇರಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮೂಲಕ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸ್ಥಾಪಿಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಮಹರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಅಲ್ಲಿನ ರೈತರು ಉತ್ತಮ ಬೆಲೆ ಪಡೆಯುತ್ತಿದ್ದು ಮಧ್ಯವರ್ತಿಗಳನ್ನು ಹೊರತುಪಡಿಸಿ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್.ದಿನೇಶ್ ರೈತರಿಗೆ ಸಲಹೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಜಿಲ್ಲಾ ನಬಾರ್ಡ್, ಕೃಷಿ ಇಲಾಖೆಯ ಆತ್ಮ ಯೋಜನೆ ವತಿಯಿಂದ ಆಯೋಜಿಸಿದ್ದ ರೈತ ಬೆಳೆಗಾರರ ಸಂಸ್ಥೆ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿದರು. ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿ ಯೊಂದಿಗೆ ಇತ್ತೀಚಿನ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ಕೃಷಿಯಲ್ಲಿ ಅಧಿಕ ಉತ್ಪಾದನೆ ಮಾಡಲು ಸಾಧ್ಯವಿದೆ. ಆದರೆ ರೈತ ಬೆಳೆದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆಯುತ್ತಿಲ್ಲ. ಮಹರಾಷ್ಟ್ರದಲ್ಲಿ ಮಾವು ಹಾಗೂ ದ್ರಾಕ್ಷಿ ಸಹಕಾರ ಸಂಘ, ಗುಜರಾತ್‍ನಲ್ಲಿ ಸಪೋಟ ಸಹಕಾರ ಸಂಘಗಳನ್ನು ಬೆಳೆಗಾರರು ಸ್ಥಾಪಿಸಿ ಈ ಸಂಘದ ಮೂಲಕವೇ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದು, ಅಧಿಕ ಲಾಭ ಗಳಿಸುತ್ತಿದ್ದಾರೆ. ದಲ್ಲಾಳಿಗಳಿಂದ ಮುಕ್ತ ವ್ಯವಸ್ಥೆಯನ್ನು ಕಂಡುಕೊಂಡಿದ್ದು, ಉತ್ತಮ ಮಾರುಕಟ್ಟೆ ಇಲ್ಲಿ ದೊರೆಯುತ್ತಿದ್ದು ಇದರಿಂದ ಇಲ್ಲಿನ ಬೆಳೆಗಾರ ಉತ್ಸುಕನಾಗಿ ಹೊಸ ಪ್ರಯೋಗ ಹೊಸ ತಾಂತ್ರಿಕತೆ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ಹೇಳಿದರು. ಕೊಡಗಿನಂತಹ ಫಲವತ್ತಾದ ಭೂಮಿಯಲ್ಲಿ ಅತ್ಯುತ್ತಮವಾದ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವದನ್ನು ನಿಲ್ಲಿಸಿ ನೇರವಾಗಿ ಗ್ರಾಹಕರಿಗೆ ಗುಣ ಮಟ್ಟಯುಕ್ತವಾಗಿ ನೀಡುವಂತಾದರೆ ಇದರ ಸಂಪೂರ್ಣ ಲಾಭಾಂಶ ರೈತನಿಗೆ ದೊರೆಯುತ್ತದೆ ಎಂದು ಹೇಳಿದರು.

ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಐ.ಎನ್. ದೊರೆಯಪ್ಪಗೌಡ ಮಾತನಾಡಿ, ರೈತರು ಹಣ್ಣು ವಿವಿಧ ಬೆಳೆಗಳನ್ನು ಹಿಂದಿನಿಂದಲೂ ಬೆಳೆಯುತ್ತಿದ್ದರೂ ಇದರ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡದೆ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬೇಕು. ಈ ನಿಟ್ಟಿನಲ್ಲಿ ಚೆಟ್ಟಳ್ಳಿ ಕೇಂದ್ರದಿಂದ ತಂತ್ರಜ್ಞಾನದ ಮಾಹಿತಿ, ಕಂಪನಿ ಸ್ಥಾಪನೆಗೆ ಪರವಾನಿಗೆ, ವಿವಿಧ ಬೆಳೆಗಳ ಸಂಸ್ಕರಣೆ ಬಗ್ಗೆ ಸಲಹೆ ನೀಡಲಾಗುವದು ಎಂದು ಹೇಳಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಜು ಜಾರ್ಜ್ ಮಾತನಾಡಿ ‘ರೈತ-ಬೆಳೆಗಾರ ಉತ್ಪಾದನಾ ಸಂಸ್ಥೆ’ ಬಗ್ಗೆ ಜಿಲ್ಲೆಯಲ್ಲಿ ಪ್ರಚಲಿತ ವಿಷಯವಲ್ಲ. ಆದರೆ ಇದರ ಬಗ್ಗೆ ಮಾಹಿತಿಯನ್ನು ನೀಡಲು ಹಾಗೂ ಬೆಳೆಗಾರರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಕೊಡಗಿನ ಕರಿಮೆಣಸಿಗೆ ಉತ್ತಮ ಹೆಸರಿದ್ದರೂ ಕೇರಳದ ಮೂಲಕ ರಫ್ತಾಗುವದರಿಂದ ಅದನ್ನು ಕೇರಳದ ಉತ್ಪನ್ನ ಎಂದು ಪರಿಗಣಿಸಿ ಆ ಮೂಲಕ ಕೇರಳಕ್ಕೆ ಹೆಚ್ಚಿನ ಲಾಭವಾಗುತ್ತಿದೆ. ಜಿಲ್ಲೆಯ ಕಾಫಿ, ಕರಿಮೆಣಸುಗಳನ್ನು ಒಂದು ಕಡೆ ಸಂಗ್ರಹಿಸಿ ಅದನ್ನು ಸಂಸ್ಕರಣೆ ಮಾಡಿ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆ ಬಿಡುಗಡೆ ಮಾಡುವದು. ಜಿಲ್ಲೆಯಲ್ಲಿ ಮರದ ನೆರಳಿನಲ್ಲಿ ಬೆಳೆಯುವ ಕಾಫಿ ಎಂದು ಗ್ರಾಹಕರಿಗೆ ಪರಿಚಯಿಸುವದು. ಈ ಮೂಲಕ ಜಿಲ್ಲೆಯ ಉತ್ಪನ್ನಗಳಿಗೆ ತನ್ನದೇ ಬೇಡಿಕೆಯನ್ನು ಸೃಷ್ಟಿಸಿಕೊಳ್ಳ ಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ನಬಾರ್ಡ್‍ನ ಡಿ.ಜಿ.ಎಂ ಎಂ.ಸಿ. ನಾಣಯ್ಯ ಮಾತನಾಡಿ, ಭಾರತದಲ್ಲಿ 12.5 ಕೋಟಿ ರೈತ ಕುಟುಂಬವಿದ್ದು ಇವರಿಗೆ ಸರಾಸರಿ 1.33 ಹೆಕ್ಟೇರ್ ಭೂಮಿ ಹೊಂದಿದ್ದಾರೆ, ಇವರಲ್ಲಿ ಶೇ 85ರಷ್ಟು ಸಣ್ಣ ಮತ್ತು ಮಧ್ಯಮವರ್ಗದ ರೈತರಾಗಿದ್ದು ಇವರಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ, ಆರ್ಥಿಕ ನೆರವು, ವೈಜ್ಞಾನಿಕ ಕೃಷಿ ಪದ್ದತಿ, ಮಾರುಕಟ್ಟೆ ವ್ಯವಸ್ಥೆ ಮಾಡಿದಾಗ ಮಾತ್ರ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಲು ಸಾಧ್ಯ ಈ ನಿಟ್ಟಿನಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ವತಿಯಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ, ಮಾರುಕಟ್ಟೆ, ಸಂಗ್ರಹ ಗೋದಾಮು ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ನೆರವು ನೀಡುತ್ತಿದೆ. ರೈತರು ವರ್ಷಂಪೂರ್ತಿ ಕಷ್ಟಪಟ್ಟ್ಟು ಬೆಳೆದ ಬೆಳೆಯನ್ನು ಮಧ್ಯವರ್ತಿಗಳಿಗೆ ಮಾರಿ ನಷ್ಟ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಅದರ ಸಂಪೂರ್ಣ ಲಾಭ ಹಾಗೂ ಫಲವನ್ನು ರೈತರಿಗೆ ದೊರೆಯುವ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತ ಉತ್ಪಾದನಾ ಸಂಸ್ಥೆ ಹುಟ್ಟುಹಾಕಲು ಹಿಂದಿನ ಕಾರ್ಯಗಾರ ದಲ್ಲಿ ಉತ್ಸುಕತೆ ಕಂಡುಬರುತ್ತಿರುವದು ಉತ್ತಮ ಬೆಳೆವಣಿಗೆ ಎಂದು ಹೇಳಿದರು. ಕೃಷಿ ಉತ್ಪಾದನಾ ಸಂಸ್ಥೆ ಸ್ಥಾಪಿಸಲು ನಬಾರ್ಡ್‍ನಿಂದ ಎಲ್ಲ ನೆರವು ನೀಡಲಾಗುವದು. ಇದೊಂದು ರಾಷ್ಟ್ರೀಯ ಕಾರ್ಯಯೋಜನೆ ಯಾಗಿದ್ದು ಇದಕ್ಕಾಗಿ ತರಬೇತಿ, ಕಟ್ಟಡ, ಗೋದಾಮು ನಿರ್ಮಾಣ, ತಾಂತ್ರಿಕತೆ, ಬಂಡವಾಳಗಳಿಗಾಗಿ ಸಂಘಗಳಿಗೆ ದೀರ್ಘಾವಧಿ, ಮಧ್ಯಾವಧಿ, ಅಲ್ಪಾವಧಿ ಸಾಲದ ನೆರವು ನೀಡಲು ನಬಾರ್ಡ್ ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಚಾಮರಾಜನಗರದ ರೈತ ಉತ್ಪಾದಕ ಸಂಘದ ಶಿವರುದ್ರಪ್ಪ ಮಾತನಾಡಿ, ಚಾಮರಾಜನಗರದಲ್ಲಿ ಈಗಾಗಲೇ ರೈತ ಉತ್ಪದಾಕರ ಸಂಸ್ಥೆ ಸ್ಥಾಪಿಸಲಾಗಿದೆ. ಈ ಮೂಲಕ ರೈತರ ಉತ್ಪನ್ನಗಳನ್ನು ರೈತರು ಸ್ಥಾಪಿಸಿದ ಈ ಸಂಘದ ಮೂಲಕವೇ ಮಧ್ಯವರ್ತಿ ಗಳನ್ನು ದೂರವಿಟ್ಟು ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತಿದ್ದು, ಅಧಿಕ ಲಾಭ ದೊರೆಯುತ್ತಿದೆ. ರೈತರು ತಾವು ಉತ್ಪಾದಕರಾಗಿದ್ದು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳ ಬೇಕು. ಇದರಿಂದ ಮಾತ್ರ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಲಾಭ ಗಳಿಸಲು ಸಾಧ್ಯ. ಕೃಷಿಯನ್ನು ಬೆಳೆದ ಉತ್ಪಾದಕರಾದ ರೈತರೇ ವ್ಯಾಪಾರೀಕರಣ ಮಾಡಬೇಕು. ಇಂದಿನ ಈ ಮಾರುಕಟ್ಟೆ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದೆ. ಕೃಷಿ ಉತ್ಪಾದನೆಗಳಿಗೆ ಮೌಲ್ಯವರ್ಧನೆ ಮಾಡಬೇಕು. ಆರ್.ಐ.ಡಿ.ಒ. ಎನ್ನುವ ಎನ್.ಜಿ.ಒ. ಸಂಸ್ಥೆ ನಬಾರ್ಡ್ ನೊಂದಿಗೆ ಕೊಡಗು ಜಿಲ್ಲೆ ಸೇರಿದಂತೆ ನೂರು ಎಫ್.ಡಿ.ಒ ಸಂಸ್ಥೆಗಳನ್ನು ಹುಟ್ಟು ಹಾಕಲು ಯೋಜನೆ ರೂಪಿಸಿದೆ. ಈ ಸಂಸ್ಥೆಯನ್ನು ನಬಾರ್ಡ್, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೋಷಣೆ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದರು. ಇಂತಹ ಸಂಸ್ಥೆಗಳನ್ನು ಸ್ಥಾಪಿಸಿದಾಗ ಮಾತ್ರ ಕೃಷಿಯ ಉಳಿಕೆ ಹಾಗೂ ಕೃಷಿಯಿಂದ ಲಾಭ ಗಳಿಸಲು ಸಾಧ್ಯ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಮುಂದೆ ಬರಬೇಕು ಎಂದು ಹೇಳಿದರು. ಕಾರ್ಯಾಗಾರ ದಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪನೆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಸಂವಾದ ನಡೆಯಿತು. ಈ ಸಂಧರ್ಭ ಜಿಲ್ಲೆಯ ಕರಿಮೆಣಸು ಬೆಳೆಗಾರರಿಂದ ಸಂಸ್ಥೆ ಸ್ಥಾಪಿಸಿ ಮಾರುಕಟ್ಟೆ ಮಾಡಲು ಹೆಚ್ಚಿನ ಉತ್ಸುಕತೆ ಕಂಡುಬಂತು. ಸಧ್ಯದಲ್ಲಿಯೇ ಈ ಬಗ್ಗೆ ಉತ್ಸುಕತೆ ಹೊಂದಿರುವವ ರನ್ನು ಸೇರಿಸಿ ಕಾರ್ಯಕ್ರಮ ನಡೆಸಲು ನಿರ್ಧರಿ¸ Àಲಾಯಿತು. ಕಾರ್ಯಗಾರ ದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಪ್ರಗತಿಪರ ಬೆಳೆಗಾರರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಬೆಂಗಳೂರು ಭಾರತೀಯ ತೋಟಗಾರಿಕಾ ಸಂಸ್ಥೆಯ ಡಾ. ಅಶ್ವಥ್ ಹಾಜರಿದ್ದರು. ಕೆ.ವಿ.ಕೆ.ಯ ವಿಜ್ಞಾನಿಗಳಾದ ವೀರೇಂದ್ರ ಕುಮಾರ್ ಸ್ವಾಗತಿಸಿ, ಪ್ರಭಾಕರ್ ನಿರೂಪಿಸಿ ವಂದಿಸಿದರು.