ಕುಶಾಲನಗರ, ನ. 30: ಹಾರಂಗಿ ಜಲಾಶಯದಿಂದ ಕಾಲುವೆಗಳ ಮೂಲಕ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಪಿರಿಯಾಪಟ್ಟಣ ಹಾರ್ನಳ್ಳಿ ಹೋಬಳಿ ರೈತರು ಕುಶಾಲನಗರದ ಹಾರಂಗಿ ಯೋಜನಾ ವೃತ್ತದ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರೆದಿದೆ.

ಶ್ಯಾನಭೋಗನಹಳ್ಳಿ ರೈತ ಮುಖಂಡ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಮಂಗಳವಾರದಿಂದ ಪ್ರತಿಭಟನೆ ನಡೆಯುತ್ತಿದ್ದು ರೈತರು ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಘೋಷಣೆ ಕೂಗಿದರು. ನೀರಿಲ್ಲದೆ ಭತ್ತದ ಬೆಳೆಗಳು ಒಣಗುತ್ತಿದ್ದು, ಬೆಳೆಗಳ ರಕ್ಷಣೆಗೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿದರು.

ರೈತರು ಕೈಗೊಂಡಿರುವ ಭತ್ತ ಕೃಷಿ ಗರ್ಭಕಟ್ಟುವ ಸಮಯ ಬಂದಿದ್ದು, ಈಗ ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ವರೆಗೆ ಕಾಲುವೆಯಲ್ಲಿ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.

ಹಾರ್ನಳ್ಳಿ ಹೋಬಳಿಯ ಶ್ಯಾನಬೊಗನಹಳ್ಳಿ, ಚಾಮರಾಯನ ಕೋಟೆ, ದೊಡ್ಡಕಮರವಳ್ಳಿ, ದಿಂಡುಗಾಡು, ಮತ್ತಿನಮುಳ್ಳುಸೋಗೆ, ಅವರ್ತಿ ಮತ್ತಿತರರ ಗ್ರಾಮಗಳಿಂದ ರೈತರು ಪಾಲ್ಗೊಂಡಿದ್ದರು.

ಸ್ಥಳಕ್ಕೆ ಆಗಮಿಸಿದ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಂ.ಎನ್. ಚಂದ್ರಕುಮಾರ್ ಜಲಾಶಯದಲ್ಲಿ ನೀರಿನ ಸಂಗ್ರಹ ಕೊರತೆ ಹಿನ್ನಲೆಯಲ್ಲಿ ಮೇಲಧಿಕಾರಿ ಗಳಿಗೆ ಮನವಿ ಬಗ್ಗೆ ಮಾಹಿತಿ ನೀಡುವದಾಗಿ ತಿಳಿಸಿದರೂ ಪಟ್ಟು ಹಿಡಿದ ರೈತರು ಕಛೇರಿಗೆ ಬೀಗ ಜಡಿಯಲು ಮುಂದಾದರು. ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ರೈತರನ್ನು ಸಮಾಧಾನಿಸಿದರು. ಈ ನಡುವೆ ರೈತನೊಬ್ಬ ಕಚೇರಿ ಬಳಿ ಮರಕ್ಕೆ ಹತ್ತಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ತಡೆದ ದೃಶ್ಯವೂ ಕಂಡುಬಂತು. ಜಲಾಶಯ ದಿಂದ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲು ವಿಫಲರಾದಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಉಗ್ರ ಹೋರಾಟ ನಡೆಸುವದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂದ್ರಶೇಖರ್, ಬಚ್ಚೇಗೌಡ, ಸುಂದರೇಶ್ ಗೌಡ, ದೇವೇಂದ್ರಪ್ಪ, ಯೋಗೇಶ್ ಗೌಡ, ಬಿ.ಎನ್. ಸೋಮಪ್ಪ, ಪರಮೇಶ್, ಬಿ.ಶಿವಣ್ಣ ಮತ್ತಿತರರು ಹಾಜರಿದ್ದರು. ಕುಶಾಲನಗರ ಠಾಣಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.