ಕೂಡಿಗೆ, ಸೆ. 20: ಮೇಲಧಿಕಾರಿಗಳ ಮೌಖಿಕ ಆದೇಶ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಗೆ ನೀರು ಸ್ಥಗಿತಗೊಳಿಸಿರುವದನ್ನು ವಿರೋಧಿಸಿ ತಾ. 21ರಂದು (ಇಂದು) ಈ ವಿಭಾಗದ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಶ್ರೀ ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಹಾರಂಗಿ ನೀರನ್ನು ನಂಬಿ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರು ಕೃಷಿ ಬೆಳೆ ಬೆಳೆದಿದ್ದು, ಭತ್ತದ ಬೆಳೆ ತೆನೆ ಕಟ್ಟುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ನೀರು ಸ್ಥಗಿತಗೊಳಿಸಿದರೆ ಗದ್ದೆ ಬರಡಾಗಿ ರೈತರ ಬಾಳು ಕಂಗೆಟ್ಟು ಹೋಗಲಿದೆ. ನದಿಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಕ.ಸಾ.ಪ. ಹೋರಾಟ

ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದ್ದ ಹಾರಂಗಿ ಜಲಾಶಯದಿಂದ ರೈತರ ಜಮೀನಿಗೆ ನೀರು ಸ್ಥಗಿತಗೊಳಿಸಿರುವದನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸಿದೆ. ಇದು ಕನ್ನಡಿಗರಿಗೆ ಆದ ಅನ್ಯಾಯವಾಗಿದ್ದು, ಈ ಅನ್ಯಾಯವನ್ನು ವಿರೋಧಿಸಿ ಪರಿಷತ್ತು ಹೋರಾಟ ನಡೆಸಲಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದ್ದಾರೆ.