ಸೋಮವಾರಪೇಟೆ,ಡಿ. 16: ಅತಿವೃಷ್ಟಿ ಮತ್ತು ಅನಾವೃಷ್ಟಿ ಯಿಂದಾಗಿ ಕೃಷಿಕರು ಸಂಕಷ್ಟದಲ್ಲಿದ್ದು, ರೈತರು ಹಾಗು ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಕೇಂದ್ರ ಹಾಗು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಬಿ.ಎಂ. ಮೋಹನ್ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ತಾಲೂಕಿನ ಗ್ರಾಮಾಭಿವೃದ್ಧಿ ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಸಾಲಮನ್ನಾ ಬೇಡಿಕೆ ಸೇರಿದಂತೆ 9 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೆ, ನಿರ್ಣಯ ಗಳನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸರ್ಕಾರದಿಂದ ತಾಲೂಕು ಬರಪೀಡಿತ ಎಂದು ಘೋಷಣೆ ಯಾಗಿದೆ. ಅಲ್ಲದೆ ಮುಂಗಾರು, ಹಿಂಗಾರು ವಿಳಂಬ ಹಾಗೂ ಅಕಾಲಿಕ ಮಳೆಯಿಂದ ರೈತರು ಕಾಫಿ ಸೇರಿದಂತೆ ಇತರ ಫಸಲು ನಷ್ಟ ಅನುಭವಿಸಿ ಸಾಲಗಾರರಾಗುತ್ತಿರುವದರಿಂದ, ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಯಿತು.
ಹಲವು ದಶಕಗಳಿಂದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯಗಳ ಮೂಲಕ ಜೀವನ ಸಾಗಿಸುತ್ತಿರುವದರಿಂದ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ನಿಲ್ಲಿಸಬೇಕು. ತಪ್ಪಿದಲ್ಲಿ ಕೃಷಿ ಸಂಘಟಿತ ಹೋರಾಟಕ್ಕೆ ತಯಾರಿರಬೇಕೆಂದು ಸಭೆ ತೀರ್ಮಾನಿಸಿತು.
ಕಾರ್ಮಿಕರ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಉತ್ಪಾದನಾ ವೆಚ್ಚ ಅಧಿಕವಾಗಿರುವ ಕಾರಣ ಸರ್ಕಾರ ಕಾಫಿಗೆ ಬೆಂಬಲ ಬೆಲೆಯೊಂದಿಗೆ ನಿಗದಿತ ಬೆಲೆ ನಿಗದಿಪಡಿಸಬೇಕು.
ತೋಟಗಾರಿಕಾ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನಿಗದಿಗೊಳಿಸ ಬೇಕು. ಕೃಷಿ ಇಲಾಖೆ ಬೆಳೆ ವಿಮೆ ಮಾಡಬೇಕು. ಭತ್ತ ಭೂಮಿ ಪಾಳುಬಿದ್ದಿರುವದರಿಂದ ಕೃಷಿ ಇಲಾಖೆ, ರೈತರಿಗೆ ಪ್ರೋತ್ಸಾಹ ಧನ ನೀಡಿ, ಭತ್ತ ಬೆಳೆಯಲು ಪ್ರೋತ್ಸಾಹ ನೀಡಬೇಕು. ಕಾಫಿ ಮಂಡಳಿ ಕಾಫಿ ಬೀಜ ವಿತರಣೆ ಸೇರಿದಂತೆ ಪ್ರತಿಯೊಂದಕ್ಕೂ ದರ ನಿಗದಿ ಮಾಡಿರುವದರಿಂದ, ಬೆಳೆಗಾರರು ಕಾಫಿ ಮಂಡಳಿಯನ್ನೆ ಮರೆಯುವಂತಾಗಿದೆ. ಕಾಫಿ ಬೀಜವನ್ನು ಬೆಳೆಗಾರರಿಗೆ ಉಚಿತವಾಗಿ ವಿತರಿಸಬೇಕು. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಕಲ್ಪಿಸ ಬೇಕೆಂದು ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತೀರ್ಮಾನಿಸಲಾಯಿತು.
ಕಾಫಿ ಮಂಡಳಿ ಮಾಜಿ ಸದಸ್ಯ ಬಿ.ಡಿ. ಮಂಜುನಾಥ್, ಎಸ್.ಬಿ. ಭರತ್ ಕುಮಾರ್, ಎಸ್.ಎಂ. ಡಿಸಿಲ್ವಾ, ತಲ್ತಾರೆ ಶೆಟ್ಟಳ್ಳಿ ಬಸಪ್ಪ, ಜಯರಾಮ್, ಸೋಮಶೇಖರ್, ಬಿ.ಎಂ. ಸುರೇಶ್, ಕಾಫಿ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಮೋಹನ್ದಾಸ್ ಅವರುಗಳು ಕಾಫಿ ಬೆಳೆಗಾರ ಸಮಸ್ಯೆ, ಕಾರ್ಮಿಕರ ಸಮಸ್ಯೆ, ವೈಜ್ಞಾನಿಕ ಕೃಷಿಯ ಬಗ್ಗೆ ಚರ್ಚಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಜಟಿಲವಾಗುತ್ತಿವೆ. ಬೆಳೆಗಾರರು ಸಂಘಟಿತ ಹೋರಾಟಕ್ಕೆ ಧುಮುಕದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸ ಬೇಕಾಗುತ್ತದೆ. ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಅನುಷ್ಠಾನಗೊಂಡರೆ, ಕೊಡಗಿನ ಕಾಫಿ ಬೆಳೆಗಾರರು ಸರ್ವನಾಶವಾಗಲಿದ್ದಾರೆ. ಈಗ ವರದಿ ಅನುಷ್ಠಾನಕ್ಕೆ ಕೇಂದ್ರದಲ್ಲಿ ತಾತ್ಕಾಲಿಕ ತಡೆ ಸಿಕ್ಕಿದೆ. ಮುಂದೆ ಏನಾಗಬಹುದು ಎಂಬದು ಗೊತ್ತಿಲ್ಲ. ಪುಷ್ಪಗಿರಿಯಿಂದ ಬ್ರಹ್ಮಗಿರಿಯವರಿಗೆ ಉಪಗ್ರಹ ಸರ್ವೆಯ ಮೂಲಕ 10 ಕಿ.ಮೀ. ಸೂಕ್ಷ್ಮಪರಿಸರ ವಲಯ ಎಂದು ಗುರುತಿಸಿದರೆ, ಕೊಡಗಿನ ಕಾಫಿ ಬೆಳೆಗಾರರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು, ನಿರ್ಗತಿಕರಾಗುವ ಸಂಭವವಿದೆ ಎಂದು ಹೇಳಿದರು. ಒತ್ತುವರಿ ತೆರವು ಭೂತ ಬೆಳೆಗಾರರನ್ನು ಕಾಡುತ್ತಿದೆ. ಕಾಫಿ ಬೆಳೆಗಾರರು ಹೋರಾಟಕ್ಕೆ ಬರದಿದ್ದರೆ, ದೊಡ್ಡಮಟ್ಟದ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದರು.
ಪ್ರಪಂಚದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ನೆರಳಿನಲ್ಲಿ ಬೆಳೆಯುವ ಕಾಫಿಗೆ ಭವಿಷ್ಯವಿರುವದರಿಂದ, ತಾಲೂಕಿನ ಕಾಫಿ ಬೆಳೆಗಾರರು ಕಾಫಿ ತೋಟದಲ್ಲಿ ನೆರಳು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕಾಫಿ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಮೋಹನ್ದಾಸ್ ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ.ಲವ, ಕಾರ್ಯದರ್ಶಿ ಎಸ್.ಸಿ.ಪ್ರಕಾಶ್, ಪದಾಧಿಕಾರಿಗಳಾದ ಅನಂತ್ರಾಮ್, ಸೀತಾ ಬೆಳ್ಳಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.