ಚೆಟ್ಟಳ್ಳಿ, ಡಿ. 4: ಇದು ಚೆಟ್ಟಳ್ಳಿಯ ಸುತ್ತಮುತ್ತಲು ಆನೆಗಳ ಹಾವಳಿಗೆ ಬೇಸತ್ತ ರೈತ ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರಲೆಂದು ಹಗಲಿರುಳು ಕಾಡಾನೆಗಳನ್ನು ಕಾಯುತ್ತಿದ್ದರೆ, ಆನೆ ಬರುವ ದಾರಿಯಲ್ಲೇ ಮೂರು ಅನಾಥ ನಾಯಿಮರಿಗಳು ಕಾಡಾನೆಯನ್ನು ಕಾವಲು ಕಾಯುತ್ತಿರುವ ವಿಶೇಷ ವರದಿ.ಚೆಟ್ಟಳ್ಳಿ ಸಮೀಪದ ನೆಲ್ಲಿಹಡ್ಲುವಿನ ಸುತ್ತಮುತ್ತಲಿನ ರೈತಾಪಿವರ್ಗ ಪ್ರತೀ ವರ್ಷ ಭತ್ತದ ಬೆಳೆಯನ್ನು ಬೆಳೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಸಮೀಪವಿರುವ ಮೀನುಕೊಲ್ಲಿ ಮೀಸಲು ಅರಣ್ಯದಿಂದ ಕಾಡಾನೆಗಳ ಹಿಂಡು ಭತ್ತದ ಗದ್ದೆಯನ್ನೆಲ್ಲ ನಾಶ ಮಾಡುತ್ತಿದೆ. ಆನೆಯನ್ನು ಓಡಿಸಲು ರೈತರು ಹಲವು ಕಾರ್ಯತಂತ್ರದೊಂದಿಗೆ ನಿತ್ಯವೂ ಹೆಣಗಾಡುತ್ತಿದ್ದಾರೆ.

ಈ ವರ್ಷ ಭತ್ತದ ಬೆಳೆಯನ್ನು ಉಳಿಕೊಳ್ಳಲು ಅರಣ್ಯದಿಂದ ಕಾಡಾನೆಗಳು ಬರುವ ದಾರಿಯಲ್ಲಿ ಸೌದೆಗಳನ್ನು ತಂದು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಸುಮಾರು ಒಂದು ತಿಂಗಳಿಂದ ಕಾವಲು ಕಾಯುತ್ತಿದ್ದಾರೆ.

ಕಳೆದ 15 ದಿನಗಳ ಹಿಂದೆ ಯಾರೋ ಸಾಕಲಾಗದೆ ಮೂರು ಹೆಣ್ಣು ನಾಯಿಮರಿಗಳನ್ನು ಇದೇ ಕಾಡಿನ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ. ಈ ನಾಯಿಮರಿಗಳು ಆಶ್ರಯವಿಲ್ಲದೆ ಆಹಾರವನ್ನು ಹುಡುಕಾಡುತ್ತಾ ಆನೆ ಓಡಿಸಲು ರೈತರು ಹಾಕಿದ್ದ ಬೆಂಕಿಯ ಹತ್ತಿರ ಬಂದು ಮಲಗಿದ್ದವು. ರಾತ್ರಿ ನಾಯಿಮರಿಗಳು ಹಸಿವು ತಾಳದೆ ಒದ್ದಾಡುತ್ತಿರುವದನ್ನು ಕಂಡು ಅಲ್ಲಿದ್ದ ರೈತರು ಮನೆಯಿಂದ ಅನ್ನ ತಂದು ಕೊಟ್ಟರು. ಮಾರನೆ ದಿನವೂ ಅದೇ ಜಾಗದಲ್ಲಿದ್ದ ನಾಯಿ ಮರಿಗಳಿಗೆ ನಿತ್ಯವೂ ಅನ್ನ ಹಾಕುವ ಕೆಲಸ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ನಾಯಿ ಮರಿಗಳು ರೈತರೊಂದಿಗೆ ಆನೆಗಳು ಬರದಂತೆ ಕಾವಲು ಕಾಯಲು ನಿಂತವು. ನಿತ್ಯವೂ ಬೆಳಗಿನಿಂದಲೇ ಆನೆ ದಾಟುವ ಜಾಗದಲ್ಲೇ ಈ ಮೂರು ನಾಯಿ ಮರಿಗಳು ಕಾವಲು ಕಾಯುತ್ತಾ, ರಾತ್ರಿಯಾಗುತ್ತಲೇ ಆನೆ ಕಾಯುವ ರೈತರು ಬೆಂಕಿ ಹಾಕಿರುವ ಸ್ಥಳದ ಸುತ್ತ ಸುತ್ತಾಡುತ್ತಾ ಕಾಡಾನೆಯನ್ನು ಕಾಯುವ ಕೆಲಸವನ್ನು ಮಾಡುತ್ತಿದೆ. ರಾತ್ರಿ ಕಾಡಾನೆ ಬರುವ ಸದ್ದು ಕೇಳಿದೊಡನೆ ಬೊಗಳಿ ರೈತರಿಗೆ ‘ಸಿಗ್ನಲ್' ನೀಡುತ್ತಿವೆ. ಇದಕ್ಕೆ ಅಲ್ಲವೇ ಹೇಳುವದು ಅನ್ನದ ಋಣ ಅಮೂಲ್ಯ; ನಾಯಿಯ ನಿಯತ್ತು ಅನುಕರಣೀಯ ಎಂದು.

-ಕರುಣ್ /ಪಪ್ಪುತಿಮ್ಮಯ್ಯ