ಮಡಿಕೇರಿ, ಡಿ. 14: ಕರ್ನಾಟಕ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ರುವ ಹಾಗೂ ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರುಗಳನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈರ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಪಿ. ರಮೇಶ್ ಅವರು ಎಷ್ಟೋ ಸಂದರ್ಭಗಳಲ್ಲಿ ಹೊಗಳಿಕೆಗಳಿಗಿಂತ ತೆಗಳಿಕೆಗಳೇ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಮಚಿತ್ತದಿಂದ ಕೆಲಸ ಮಾಡಬೇಕು. ನೋವು-ನಲಿವುಗಳನ್ನು ಸಮಾನಾಗಿ ಸ್ವೀಕರಿಸಿದರೆ ಸಾಧನೆ ಮಾಡಲು ಸಾಧ್ಯವೆಂದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ಪತ್ರಿಕಾಭವನ ನಿರ್ಮಾಣಕ್ಕೆ ಸರಕಾರದಿಂದ ಬಿಡುಗಡೆಯಾಗಿರುವ ರೂ. 12 ಲಕ್ಷ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಪತ್ರಕರ್ತರು ಸೌಹಾರ್ದತೆಯಿಂದ ಹಣ ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರಕಾರಕ್ಕೆ ವಾಪಸಾಗುವ ಸಾಧ್ಯತೆ ಇದೆ ಎಂದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ, ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ಕುಟ್ಟಪ್ಪ, ಶ್ರೀಧರ್ ನೆಲ್ಲಿತ್ತಾಯ ಇನ್ನಿತರರು ಸನ್ಮಾನಿತರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಅವರ ಪತ್ನಿ ನಂದಿನಿ ಸೇರಿದಂತೆ ಪತ್ರಕರ್ತರು ಇದ್ದರು. ಕೆ. ತಿಮ್ಮಪ್ಪ ಸ್ವಾಗತಿಸಿದರೆ, ಅನಿಲ್ ಹೆಚ್.ಟಿ. ವಂದಿಸಿದರು.