ನವದೆಹಲಿ, ನ. 8: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಂಗಳವಾರ ರಾತ್ರಿ ‘ಬಿಗ್ ಬ್ರೇಕಿಂಗ್ ನ್ಯೂಸ್’ ನೀಡಿದ್ದಾರೆ. ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರೂ. 500 ಹಾಗೂ ರೂ. 1000 ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಬಂದ್ ಆಗಲಿದೆ ಎಂದು ಘೋಷಿಸಿದ್ದಾರೆ

ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು:

* ಹೊಸ ರೂ. 500 ಹಾಗೂ ರೂ. 2000 ಕರೆನ್ಸಿ ನೋಟು ಶೀಘ್ರವೇ ಚಾಲನೆಗೆ

* ರೂ. 500 ಹಾಗೂ ರೂ. 1000 ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ

* ನವೆಂಬರ್ 10ರಿಂದ ಡಿಸೆಂಬರ್ 31 ರೊಳಗೆ ರೂ. 500 ಹಾಗೂ ರೂ. 1000 ಬದಲಾಯಿಸಿಕೊಳ್ಳಿ

* ನವೆಂಬರ್ 9 ಹಾಗೂ 10 ಎಲ್ಲಾ ಎಟಿಎಂಗಳು ಬಂದ್ ಆಗಲಿವೆ

* ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಿತಿ ದಿನವೊಂದಕ್ಕೆ ರೂ. 2,000 ಮಾತ್ರ.

* ಬ್ಯಾಂಕುಗಳು, ಎಟಿಎಂ, ಅಂಚೆ ಕಚೇರಿಗಳಲ್ಲಿ ನೋಟು ಬದಲಾವಣೆಗೆ ಕ್ರಮ.

* ನಗದು ರಹಿತ ವ್ಯವಹಾರದಲ್ಲಿ ಯಾವದೇ ತೊಂದರೆಯಿಲ್ಲ.

* ತಮ್ಮ ಬಳಿ ನಗದು ಹಣ ಇರಿಸಿಕೊಂಡಿರುವವರು ಈ ಹಣವನ್ನು ಬ್ಯಾಂಕ್ ಗಳಿಗೆ ಹಸ್ತಾಂತರಿಸಲು ಯಾವದೇ ನಿರ್ಬಂಧವಿಲ್ಲ ಆದರೆ, ತೆರಿಗೆ ಪಾವತಿಸದ ಕಪ್ಪು ಹಣವಾದರೆ ಅಂತಹವರು ಸರಕಾರಕ್ಕೆ ತೆರಿಗೆ ಪಾವತಿಸುವದು ಅನಿವಾರ್ಯವಾಗುತ್ತದೆ.

ತಾ. 8 ರ ಮಧ್ಯರಾತ್ರಿಯಿಂದಲೇ 500-1000 ರೂಪಾಯಿ ನೋಟುಗಳ ಚಲಾವಣೆ ಬಂದ್. ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ಪ್ರಧಾನಿ ಮೋದಿ ಮುನ್ನುಡಿ.

ತಾ. 8ರ ಮಧ್ಯರಾತ್ರಿಯಿಂದ 500-1000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುತ್ತಿದ್ದು, ನಾಳೆಯಿಂದ ರೂ. 500-1000 ನೋಟುಗಳ ಚಲಾವಣೆ ಇರುವದಿಲ್ಲ. ಸದ್ಯ ರೂ. 500-1000 ನೋಟುಗಳ ಬದಲಾವಣೆಗೆ 50 ದಿನಗಳ ಕಾಲಾವಕಾಶ ನೀಡಲಾಗಿದ್ದು ಅಷ್ಟರಲ್ಲಿ ನೋಟುಗಳನ್ನು ಬದಲಾಯಿಸಿ ಕೊಳ್ಳಬಹುದಾಗಿದೆ.

ನಾಳೆ ದೇಶಾದ್ಯಂತ ಯಾವದೇ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವದಿಲ್ಲ. ತಾ. 9 ರಂದು (ಇಂದು) ಮತ್ತು 10 ರ ಮಧ್ಯರಾತ್ರಿವರೆಗೆ ಎಟಿಎಂ ಸೆಂಟರ್‍ಗಳು ತೆರೆದಿರುವದಿಲ್ಲ.