ಸೋಮವಾರಪೇಟೆ, ಸೆ. 27: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರೂ. 48.31 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ತಿಳಿಸಿದರು.

2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.

2015-16ನೇ ಸಾಲಿನಲ್ಲಿ ಸಂಘದಲ್ಲಿ ಒಟ್ಟು 3988 ಸದಸ್ಯರನ್ನು ಹೊಂದಿದ್ದು, ರೂ. 195.43 ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. 23,22,72,635 ರೂ.ಗಳ ವ್ಯವಹಾರ ನಡೆಸಿದ್ದು, ರೂ. 48.31 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ 497 ಸದಸ್ಯ ರೈತರಿಗೆ ರೂ. 1067.41 ಲಕ್ಷ ಫಸಲು ಸಾಲವನ್ನು ವಿತರಿಸಲಾಗಿದ್ದು, ಶೇ. 100 ಸಾಲ ವಸೂಲಾತಿಯಾಗಿದೆ. 16-17ನೇ ಸಾಲಿನಲ್ಲಿ ಕೃಷಿಯೇತರ ಆಸ್ತಿ ಆಧಾರಿತ ಸಾಲ ವಿತರಿಸುತ್ತಿದ್ದು, ಸದಸ್ಯರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕೆಂದರು.

ಸಂಘದಲ್ಲಿ ಜಾಮೀನು ಸಾಲ ರಕ್ಷಣಾ ವಿಮಾ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯಲ್ಲಿ ಮೃತಪಟ್ಟ 57ಸಾಲಗಾರ ಸದಸ್ಯರ ರೂ. 3.08 ಲಕ್ಷ ವಸೂಲಾತಿಯಾಗಿದೆ.

ಯಶಸ್ವಿನಿ ಯೋಜನೆಯಡಿಯಲ್ಲಿ 1710 ಸದಸ್ಯರು ನೋಂದಾವಣೆ ಮಾಡಿಕೊಂಡಿದ್ದು, 200ಕ್ಕೂ ಹೆಚ್ಚಿನ ಸದಸ್ಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಅಬ್ಬೂರುಕಟ್ಟೆ ಶಾಖೆಯಲ್ಲಿ ಉತ್ತಮವಾಗಿ ವ್ಯವಹಾರ ನಡೆಸಲಾಗುತ್ತಿದೆ. ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಳಗುಂದ ಗ್ರಾಮದಲ್ಲಿ ರೂ. 35 ಲಕ್ಷ ವೆಚ್ಚದಲ್ಲಿ 200 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ಹಾಗೂ ವಾಣಿಜ್ಯ ಸಂಕಿರ್ಣ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹ ಧನದ ಚೆಕ್‍ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಮಾ ಸುದೀಪ್, ಸದಸ್ಯರಾದ ಬಿ.ಡಿ. ಮಂಜುನಾಥ್, ಕೆ.ಎಸ್. ದಾಸಪ್ಪ, ಎಂ.ಎಸ್. ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಎಚ್.ಜಿ. ನಳಿನಿ ಗಣೇಶ್, ಎಸ್.ಎನ್. ಸೋಮಶೇಖರ್, ಕೆ.ಜಿ. ಸುರೇಶ್, ರೂಪಾ ಸತೀಶ್ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಎಂ. ಕುಟ್ಟಪ್ಪ ಉಪಸ್ಥಿತರಿದ್ದರು.