ಕುಶಾಲನಗರ, ನ. 25: ಐನೂರು ಮತ್ತು ಸಾವಿರ ರೂಪಾಯಿಗಳ ನೋಟು ಬದಲಾವಣೆ ಹಿನ್ನೆಲೆ ಕುಶಾಲನಗರ ವ್ಯಾಪ್ತಿಯ ಬ್ಯಾಂಕ್‍ಗಳಲ್ಲಿ ರೂ. 150 ಕೋಟಿಗಳಿಗೂ ಅಧಿಕ ಮೊತ್ತದ ಹಣ ಬದಲಾವಣೆಯಾಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದಿದೆ.ತಾ. 9 ರ ನಂತರ ಕುಶಾಲನಗರದ ಮತ್ತು ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯ 15 ಕ್ಕೂ ಅಧಿಕ ಬ್ಯಾಂಕ್‍ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು ದಿನನಿತ್ಯ ಕೋಟಿಗಟ್ಟಲೆ ಹಣ ಬದಲಾಗುತ್ತಿರುವದು ಖಚಿತ ಮೂಲಗಳ ಮೂಲಕ ಮಾಹಿತಿ ಹೊರಬಿದ್ದಿದೆ.

ಈ ನಡುವೆ ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದ ಸಾವಿರಾರು ಸಂಖ್ಯೆಯ ಟಿಬೇಟಿಯನ್ ನಾಗರಿಕರು ಹಾಗೂ ಬೌದ್ಧ ಭಿಕ್ಷುಗಳು ಕೊಡಗು ಜಿಲ್ಲೆ ಮತ್ತು ಮೈಸೂರು ಭಾಗದ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ದಿನ ರಾತ್ರಿ ಎನ್ನದೆ ನಿಲ್ಲುತ್ತಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ದಳದ ಅಧಿಕಾರಿಗಳ ತಂಡ ನಿಗಾವಹಿಸಿರುವ ಬಗ್ಗೆ ತಿಳಿದು ಬಂದಿದೆ. ವಿಶೇಷವೆಂದರೆ ಬಹುತೇಕ ಟಿಬೇಟಿಯನ್ ಮೂಲದ ಬೌದ್ಧ ಭಿಕ್ಷುಗಳು ಬ್ಯಾಂಕ್‍ನಲ್ಲಿ ರೂ. 49 ಸಾವಿರ ಮಾತ್ರ ಖಾತೆಗೆ ಜಮೆ ಮಾಡುತ್ತಿರುವದು ಕೂಡ ಸಂಶಯಕ್ಕೆ ಎಡೆ ಮಾಡಿದೆ. ಬಹುತೇಕ ಎಟಿಎಂ ಕೇಂದ್ರಗಳು, ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಟಿಬೇಟಿಯನ್ ಬೌದ್ಧ ಭಿಕ್ಷುಗಳು ಬ್ಯಾಂಕ್ ಮುಂದೆ ಅಧಿಕ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಹಿನ್ನೆಲೆ ಸ್ಥಳೀಯ ಸಾಮಾನ್ಯ ಜನತೆ ಹಾಗೂ ರೈತರು ಮತ್ತು ವಹಿವಾಟುದಾರರಿಗೆ ನೋಟು ಬದಲಾವಣೆಗೆ ಕಿರಿಕಿರಿ ಉಂಟಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಕೆ.ಜಿ. ಮನು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ. ಈ ಬಗ್ಗೆ ಶಿಬಿರದ ಪ್ರತಿನಿಧಿಯಾದ ಡ್ಯಾಂಬಲ್ ಎಂಬವರನ್ನು ‘ಶಕ್ತಿ’ ಸಂಪರ್ಕಿಸಿದ ಸಂದರ್ಭ ಹಣದ ವಹಿವಾಟಿನ ಬಗ್ಗೆ ತಮಗೆ ಯಾವದೇ ಮಾಹಿತಿಯಿಲ್ಲ ಎಂದು ಪ್ರತಿಕ್ರಿಯಿಸಿದ್ದು ತಮ್ಮವÀರಿಗೆ ಈ ಬಗ್ಗೆ ಸಮರ್ಪಕ ಸೂಚನೆ ನೀಡುವದಾಗಿ ಭರವಸೆ ನೀಡಿದ್ದಾರೆ.

ಬ್ಯಾಂಕ್‍ಗಳಲ್ಲಿ ರೂ. 150 ಕೋಟಿಗಳಿಗೂ ಅಧಿಕ ಹಣ ರೂ. 500 ಮತ್ತು 1000 ನೋಟ್‍ಗಳ ಹೆಸರಿನಲ್ಲಿ ಬದಲಾವಣೆಯಾಗಿದ್ದು, ಇದರಲ್ಲಿ ಹೆಚ್ಚಿನ ಮೊತ್ತ ಟಿಬೇಟಿಯನ್ನರ ಪಾಲಾಗಿರುವದು ಕಂಡು ಬಂದಿದೆ. ಇದು ದಕ್ಷಿಣ ಭಾರತದ ಹೋಬಳಿಯೊಂದರಲ್ಲಿ ದಾಖಲೆ ಮೊತ್ತದ ಬದಲಾವಣೆ ಯಾಗಿರುತ್ತದೆ ಎನ್ನುವದು ಸ್ಥಳೀಯರ ಅಭಿಪ್ರಾಯವಾಗಿದೆ. ಇದರೊಂದಿಗೆ ಬೈಲುಕೊಪ್ಪೆ ಶಿಬಿರಕ್ಕೆ ಕೇರಳ ಮೂಲದ ಕೆಲವು ಉದ್ಯಮಿಗಳು ಕೋಟಿಗಟ್ಟಲೆ ನಗದಿನೊಂದಿಗೆ ಭೇಟಿ ನೀಡಿರುವ ಬಗ್ಗೆ ಮಾಹಿತಿಯಿದ್ದು ಕಪ್ಪು ಹಣವನ್ನು ಮಾರ್ಪಾಡು ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಗೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಬಗ್ಗೆಯೂ ವದಂತಿಗಳು ಹಬ್ಬಿದ್ದು, ಈ ಸಂದರ್ಭ ಈಗಾಗಲೇ ಕೇಂದ್ರ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೈಲುಕೊಪ್ಪೆಯಲ್ಲಿ ಮೊಕ್ಕಾಂ ಹೂಡಿರುವ ಬಗ್ಗೆಯೂ ಮೂಲಗಳು ತಿಳಿಸಿವೆ. ಯಾವದೇ ರೀತಿಯ ತೆರಿಗೆ ಪಾವತಿಸದೆ ಇರಿಸಿರುವ ಕೋಟ್ಯಾಂತರ ಮೊತ್ತದ ಹಣ ಇದೀಗ ಹೊರ ಬರುತ್ತಿರುವ ಬಗ್ಗೆ ಜನವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.

ಕುಶಾಲನಗರ ಮತ್ತು ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಶೇ. 75 ರಷ್ಟು ಟಿಬೇಟಿಯನ್ ಬೌದ್ಧ ಭಿಕ್ಷುಗಳು ಹಣದ ಬದಲಾವಣೆಗೆ ಬ್ಯಾಂಕ್ ಮತ್ತು ಅಂಚೆ ಕಚೇರಿ ಹಾಗೂ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ನಿಂತಿರುವದು ಈ ಎಲ್ಲಾ ಗುಮಾನಿಗೆ ಪುಷ್ಠಿ ನೀಡುತ್ತಿದೆ ಎಂದರೆ ತಪ್ಪಾಗಲಾರದು.

- ಚಂದ್ರಮೋಹನ್