ಮಡಿಕೇರಿ, ಜ. 21: ಮದುವೆ ಎಂಬದು ಗಂಡು - ಹೆಣ್ಣಿನ ನಡುವಿನ ಬಾಳಿನ ಅತ್ಯಂತ ಪ್ರಮುಖ ಘಟ್ಟ..., ಸುಖ- ಸಂತೋಷ ಗಳೊಂದಿಗೆ ಸಂಸಾರವೆಂಬ ನೇಗಿಲಿಗೆ ಹೆಗಲು ಕೊಡುವ ಅಪೂರ್ವ ಕ್ಷಣ..., ಅಪ್ಪ- ಅಮ್ಮ, ಅಣ್ಣ - ತಮ್ಮ, ಅಕ್ಕ - ತಂಗಿ, ಬಂಧುಮಿತ್ರರೆಲ್ಲರೂ, ಊರಿನವರೆಲ್ಲ ಮನಃಪೂರ್ವಕವಾಗಿ ಹರಸಿ, ಹಾರೈಸಿ, ಧಾರೆಯೆರೆದು ಕೊಡುವ ಸಂತಸದ ಸಂಭ್ರಮ..., ಆದರೆ...,
ಮದುವೆ ಮಂಟಪವೇರುವ ವೇಳೆಯಲ್ಲಿ ಹರಸಿ, ಹಾರೈಸಬೇಕಾದ ಪೂಜ್ಯರಲ್ಲಿ ಪೂಜ್ಯರಾದ ತಂದೆ ಇಹಲೋಕ ತ್ಯಜಿಸಿದರೆ ಆ ಮದುಮಗಳ..., ಕುಟುಂಬದ..., ಬಂಧುಗಳ, ಊರಿನವರ, ವರಿಸಲು ಸಿದ್ಧನಾಗಿ ನಿಂತಿರುವ ವರನ ಕಡೆಯವರ ಪರಿಸ್ಥಿತಿ ಹೇಗಿರಬಹುದು...? ಇಂತಹ ಕ್ರೂರ ಸನ್ನಿವೇಶ ಯಾರಿಗೂ ಬರಬಾರದು ಎಂದೇ ಪ್ರಾರ್ಥಿಸುತ್ತೇವಲ್ಲವೇ...?, ಆದರೆ ವಿಧಿ ಲೀಲೆಯೇ ಬೇರೆಯಾಗಿರುತ್ತೆ..., ಅಂತಹ ಒಂದು ಸನ್ನಿವೇಶವೇ ಇಂದು ಘಟಿಸಿ ಹೋಗಿದೆ..., ಮಗಳ ಮದುವೆಯನ್ನು ಸಂಭ್ರಮದಿಂದ ಮಾಡಿಕೊಡ ಬೇಕೆಂದು ಎದೆಯೊಳಗೆ ನೂರಾರು ಕನಸನ್ನಿಟ್ಟುಕೊಂಡು ಓಡಾಡಿ ಕೊಂಡಿದ್ದ ತಂದೆಯೋರ್ವರು ಅಪಘಾತಕ್ಕೆ ಬಲಿಯಾಗಿದ್ದಾರೆ. ಸಂಭ್ರಮದಲ್ಲಿದ್ದ ಮದುವೆ ಮನೆ ಶೋಕ ಸಾಗರದಲ್ಲಿ ಮುಳುಗು ವಂತಾಗಿದೆ. ಮದುವೆ ಸಮಾರಂಭಕ್ಕೆ ಬಂದವರಿಗೆ ಪನ್ನೀರಿನ ಬದಲಿಗೆ
(ಮೊದಲ ಪುಟದಿಂದ) ಕಣ್ಣೀರಿನ ಸ್ವಾಗತ ಎದುರುಗೊಂಡಿದೆ. ಕೊನೇ ಘಳಿಗೆಯಲ್ಲಿ ಆಪತ್ತು ಎದುರಾಗಿದ್ದರಿಂದ ವಿಧಿಯಿಲ್ಲದೆ ಅಪ್ಪನ ಅಗಲಿಕೆಯ ನೋವಿನ ನಡುವೆಯೂ ಮಗಳ ಮದುವೆ ಕಾರ್ಯ ನೆರವೇರಿಸುವ ಪರಿಸ್ಥಿತಿ ಕುಟುಂಬಸ್ಥರ ಮುಂದಿದೆ.
ದಕ್ಷಿಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ಉತ್ತಯ್ಯ (ಮುತ್ತು-65) ಎಂಬವರೇ ದುರ್ಮರಣಕ್ಕೀಡಾದ ನತದೃಷ್ಟರು. ಉತ್ತಯ್ಯ ಅವರಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಪುತ್ರನಿದ್ದು, ಹಿರಿಯ ಪುತ್ರಿ ಪೂವಮ್ಮ ಎಂಬಾಕೆಯ ವಿವಾಹ ನಿಶ್ಚಯವಾಗಿದ್ದು, ಇಂದು ಮತ್ತು ನಾಳೆ ವಿವಾಹ ಸಮಾರಂಭವಾಗಿದೆ. ಇಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮಧುರಂಗಿ ಶಾಸ್ತ್ರ ಹಾಗೂ ಚಪ್ಪರ ಸಮಾರಂಭವಿದ್ದುದರಿಂದ ಉತ್ತಯ್ಯ ಅವರು ಬೆಳಿಗ್ಗೆ ತಮ್ಮ ಪತ್ನಿ ಹಾಗೂ ಇತರ ಐವರೊಂದಿಗೆ ಅಡುಗೆ ಕಾರ್ಯಕ್ಕೆ ಒಲೆಪೂಜೆ ನೆರವೇರಿಸಲೆಂದು ಸಮಾಜಕ್ಕೆ ತಮ್ಮ ಮಾರುತಿ ವ್ಯಾನ್‍ನಲ್ಲಿ ಹೊರಟಿದ್ದರು. ರಾಹುಕಾಲ ಬರುವ ಮುನ್ನ ಪೂಜೆ ನೆರವೇರಿಸಬೇಕೆಂದು ಧಾವಂತದಲ್ಲಿ ವ್ಯಾನ್ ಚಲಾಯಿಸುತ್ತಿದ್ದ ಸಂದರ್ಭ ಮನೆಯಿಂದ 2 ಕಿ.ಮೀ. ದೂರದಲ್ಲಿನ ಬೆಸಗೂರು ತಿರುವಿನಲ್ಲಿ ಉತ್ತಯ್ಯ ಅವರ ನಿಯಂತ್ರಣಕ್ಕೆ ಬಾರದ ವ್ಯಾನ್ ಬಲಬದಿಗೆ ಮಗುಚಿಕೊಂಡಿದೆ. ವ್ಯಾನ್‍ನ ಬಾಗಿಲಿಗೆ ಕೈ ಸಿಲುಕಿಕೊಂಡು ಜಖಂ ಆಗಿದ್ದಲ್ಲದೆ, ತಲೆ, ಬೆನ್ನಿಗೆ ತೀವ್ರ ಪೆಟ್ಟಾದ ಕಾರಣ ಉತ್ತಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾರ್ಗದರ್ಶಿ ಮುಖದರ್ಶನ
ಉತ್ತಯ್ಯ ಅವರ ಪುತ್ರಿ ಪೂವಮ್ಮ ಅವರ ವಿವಾಹ ಕುಟ್ಟ ಗ್ರಾಮದ ಅಪ್ಪಂಡೇರಂಡ ದೇವಯ್ಯ ಎಂಬವರೊಂದಿಗೆ ನಿಶ್ಚಯವಾಗಿದ್ದು, ಇಂದು ಮಧುರಂಗಿ ಶಾಸ್ತ್ರ (ತೋರಣ ಮಂಗಲ) ಆಗಬೇಕಿತ್ತು. ಆದರೆ ದುರ್ವಿಧಿ ಉತ್ತಯ್ಯ ಅವರನ್ನು ಬಲಿತೆಗೆದುಕೊಂಡಿದೆ. ಮದುವೆ ಕಾರ್ಯಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದರಿಂದ ಬೇರೆ ಮಾರ್ಗವಿಲ್ಲದೆ ಇಂದೇ ಶಾಸ್ತ್ರ ಮುಗಿಸಿ, ನಾಳೆಯೇ ಮದುವೆಕಾರ್ಯ ಮುಗಿಸುವ ಬಗ್ಗೆ ಉಭಯ ಕಡೆಯವರು ತೀರ್ಮಾನಿಸಿದ್ದಾರೆ. ಹಾಗಾಗಿ ಮೃತದೇಹವನ್ನು ಮನೆಗೆ ಕೊಂಡೊಯ್ದರೆ ಅಪವಿತ್ರವಾಗುವದರಿಂದ ಮಧುಮಗಳನ್ನು ಪದ್ಧತಿಯಂತೆ ಮನೆಯಿಂದ ಇಳಿಸಿ, ಮಾರ್ಗಮಧ್ಯೆ ಬಂಧುಗಳ ಮನೆಗೆ ಕರೆತಂದು ಅಲ್ಲಿಗೆ ತಂದೆಯ ಅಂತಿಮ ದರ್ಶನ ಮಾಡಿಸಿ, ನಂತರ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಕೊಡವರ ಪದ್ಧತಿಯಂತೆ ಸಾವು ಸಂಭವಿಸಿದ ನಂತರ ತಲೆಕೂದಲು ಅರ್ಪಿಸಿದ ಬಳಿಕ ಸೂತಕವಾಗುತ್ತದೆ. ಆದರೆ ಈ ಒಂದು ಶುಭಕಾರ್ಯ ಇರುವದರಿಂದ ನಾಡಿದ್ದು, ತಲೆಕೂದಲು ಅರ್ಪಿಸುವ ಕಾರ್ಯವನ್ನು ಇಟ್ಟುಕೊಳ್ಳಲಾಗಿದೆ.
ಶೋಕದಲ್ಲಿ ಶಾಸ್ತ್ರ
ಅಂತಿಮ ಸಂಸ್ಕಾರದ ಬಳಿಕ ಪದ್ಧತಿಯಂತೆ ಸಮಾಜಕ್ಕೆ ಆಗಮಿಸಿದ ಮದುವೆ ಮನೆಯವರು, ಕುಟುಂಬಸ್ಥರು, ಬಂಧು ಬಾಂಧವರು ಸಂಪ್ರದಾಯದಂತೆ ಮಧುರಂಗಿ ಶಾಸ್ತ್ರ ನೆರವೇರಿಸಿದ್ದಾರೆ. ತಾ.22ರಂದು (ಇಂದು) ನಿಗದಿಯಾಗಿರುವಂತೆ ಮದುವೆಕಾರ್ಯ ನಡೆಯಲಿದೆ. ಪ್ರಥಮ ಪುತ್ರಿಯ ಮದುವೆಯನ್ನು ಸಂಭ್ರಮದಿಂದ ಮಾಡಬೇಕೆಂಬ ಕನಸು ಕಂಡಿದ್ದ ಉತ್ತಯ್ಯ ಅವರ ಸಾವು ಇಡೀ ಕುಟುಂಬಸ್ಥರಲ್ಲಿ ದುಃಖದ ಛಾಯೆಯನ್ನು ಮೂಡಿಸಿದೆ.
ಅಪ್ಪನ ಆಶೀರ್ವಾದದೊಂದಿಗೆ ಹಸೆಮಣೆ ಏರಬೇಕಾಗಿದ್ದ ಮದುಮಗಳು ಪೂವಮ್ಮಳ ಆಕ್ರಂದನವಂತೂ ಮುಗಿಲು ಮುಟ್ಟುವಂತಿತ್ತು. ಎಲ್ಲರೂ ಒಂದಾಗಿ ನಕ್ಕು ನಲಿದಾಡಬೇಕಾಗಿದ್ದ ಕುಟುಂಬ ದುಃಖಾಶ್ರುವಿನ ನಡುವೆ ವಿವಾಹ ನೆರವೇರಿಸಬೇಕಾದ ಅನಿವಾರ್ಯತೆಗೆ ಒಳಗಾಗಿದೆ. ಉತ್ತಯ್ಯ ಅವರ ಮಾಸದ ನೆನಪಿನಲ್ಲಿ ವಿವಾಹ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿದೆ.
-ಕುಡೆಕಲ್ ಸಂತೋಷ್, ಎನ್.ಎನ್. ದಿನೇಶ್.