ಸೋಮವಾರಪೇಟೆ, ಆ. 17: ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರನ್ನು ಕೂಡಲೆ ಬಂಧಿಸಬೇಕು ಹಾಗೂ ಅವರಿಗೆ ವೇದಿಕೆ ದೊರಕಿಸಿಕೊಟ್ಟ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ವಿವೇಕಾನಂದ ಸರ್ಕಲ್‍ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಗೃಹ ಸಚಿವರ ಒಡೆತನದ ಎಸ್.ಎಸ್.ಐ.ಟಿ. ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರು ಕೂಡಲೇ ಎಲ್ಲಾ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು. ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಆ.13ರಂದು ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪೊಲೀಸರು ಕೂಡ ಸ್ವಯಂ ದೂರು ದಾಖಲಿಸಿಕೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವದು ಖಂಡನೀಯ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕು ಎಂದು ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದರಾಜು ಒತ್ತಾಯಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಶಿರಸ್ತೇದಾರ್ ಚಿಣ್ಣಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಬಿ.ಜೆ. ದೀಪಕ್, ಪ್ರಮುಖರುಗಳಾದ ಸುಭಾಶ್ ತಿಮ್ಮಯ್ಯ, ಎಚ್.ಎನ್.ಅಶೋಕ್, ಅಭಿಷೇಕ್, ದಿವಾಕರ್, ಉಮೇಶ್, ಮಹೇಶ್ ತಿಮ್ಮಯ್ಯ, ರೂಪಸತೀಶ್ ಮತ್ತಿತರರು ಇದ್ದರು.