ಮಡಿಕೇರಿ, ಡಿ. 8: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೇಂದ್ರÀ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ನಡೆಯಲಿರುವ 24 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 3 ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪುತ್ತೂರಿನಲ್ಲಿ ಈಚೆಗೆ (ಡಿ. 2 ರಿಂದ 5 ರ ವರೆಗೆ) ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಎಂಬ ಕೇಂದ್ರ ವಿಷಯ ಕುರಿತಂತೆ ಏರ್ಪಡಿಸಿದ್ದ ರಾಜ್ಯಮಟ್ಟದ 24 ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ 30 ಮಂದಿ ವಿದ್ಯಾರ್ಥಿಗಳ ಪೈಕಿ ಕೊಡಗಿನಿಂದ 3 ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳ ವಿವರ ಇಂತಿದೆ.
ನಗರ ಕಿರಿಯ ವಿಭಾಗದಿಂದ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹರ್ಷ್ ಪೊನ್ನಪ್ಪ (ವಿಷಯ: ಆರೋಗ ಮತ್ತು ಪೌಷ್ಟಿಕತೆ), (ಮಾರ್ಗದರ್ಶಿ ಶಿಕ್ಷಕಿ: ಕೋಟೆರಾ ಮೀರಾ ಪೂಣಚ್ಚ).
ನಗರ ಹಿರಿಯ ವಿಭಾಗದಿಂದ ಮಡಿಕೇರಿ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಶಹನಾ ರುಕಿಯಾ (ವಿಷಯ: ಇಂಗಾಲದ ಹೆಜ್ಜೆ ಗುರುತುಗಳು), (ಮಾರ್ಗದರ್ಶಿ ಶಿಕ್ಷಕಿ: ಬಿ.ಜಿ.ನೃತ್ಯ) ಹಾಗೂ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಂ. ತಂಗಮ್ಮ (ಹಳೆಯ ಸಾಂಪ್ರದಾಯಿಕ ಜ್ಞಾನ ಪದ್ಧತಿ), (ಮಾರ್ಗದರ್ಶಿ ಶಿಕ್ಷಕಿ: ಪಿ.ಎಂ.ಶಾರದ) ಆಯ್ಕೆಯಾಗಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್ ತಿಳಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ ಕಿರಿಯ ವಿಜ್ಞಾನಿಗಳು ಕಳೆದ 5 ವರ್ಷಗಳಿಂದ ಸತತವಾಗಿ ಆಯ್ಕೆಗೊಂಡಿದ್ದಾರೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಂಟಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ಸಮಾವೇಶಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಉಪ ವಿಷಯದಡಿ ವಿದ್ಯಾರ್ಥಿಗಳು ಗುಂಪು ಅಧ್ಯಯನದ ಕೈಗೊಂಡು ಸಮೀಕ್ಷೆ ನಡೆಸಿ, ವಿಶ್ಲೇಷಿಸುವ ಮೂಲಕ ಸ್ಥಳೀಯ ಪರಿಸರದ ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ನೆರವಾಗಿರುವ ಮಕ್ಕಳ ವಿಜ್ಞಾನ ಸಮಾವೇಶವು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ನೆರವಾಗಿದೆ ಎಂದು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಡಿ. 5 ರಂದು ನಡೆದ ರಾಜ್ಯಮಟ್ಟದ 24 ನೇ ಮಕ್ಕಳ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಕಿರಿಯ ವಿಜ್ಞಾನಿಗಳಿಗೆ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಪ್ರಶಸ್ತಿ ಪತ್ರ ವಿತರಿಸಿದರು. ಮಂಗಳೂರು ಬಿ.ಎಡ್.ಕಾಲೇಜಿನ ಹಿರಿಯ ಉಪನ್ಯಾಸಕ ವೈ.ಶಿವರಾಮಯ್ಯ, ಪುತ್ತೂರು ಬಿಇಓ ಶಶಿಧರ್, ರಾಜ್ಯ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್, ಸಮಾವೇಶದ ಸಂಚಾಲಕರಾದ ಎಚ್.ಎಸ್.ಕರುಣಾಕರ್, ಜಿಲ್ಲಾ ಶೈಕ್ಷಣಿಕ ಸಂಯೋಜಕ ಜಿ.ಶ್ರೀಹರ್ಷ, ಆಯ್ಕೆಗೊಂಡ ಕಿರಿಯ ವಿಜ್ಞಾನಿಗಳ ತಂಡದ ಸದಸ್ಯರು ಹಾಗೂ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.