ಮಡಿಕೇರಿ, ಡಿ.9: ಅಮ್ಮತ್ತಿಯ ಮಿಲನ್ಸ್ ಯೂತ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಮುಕ್ತ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ ತಾ.30ರಿಂದ ಜ.1 ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಎಂ.ಎಂ. ಲಿಜೇಶ್, ಅಮ್ಮತ್ತಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಫುಟ್ಬಾಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಾಯಿತ 16 ತಂಡಗಳು ಹಾಗೂ ಹೊರ ಜಿಲ್ಲೆಯ 16 ತಂಡಗಳು ಸೇರಿದಂತೆ ಒಟ್ಟು 32 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿರುವದಾಗಿ ಮಾಹಿತಿ ನೀಡಿದರು.
ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಉದ್ಘಾಟಿಸಲಿದ್ದಾರೆ, ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಆಟಗಾರರನ್ನು ಸನ್ಮಾನಿಸಲಾಗುವದು, ಇದರಲ್ಲಿ ದಾನಿಗಳಾದ ವಿನೋದ್ ಶಿವಪ್ಪ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷÀರುಗಳಾದ ಶಶಿ ಸುಬ್ರಮಣಿ, ವಿಜು ಸುಬ್ರಮಣಿ, ಬಿಜೆಪಿ ಪ್ರಮುಖ ಸುಜಾ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಪ್ರಥಮ ಬಹುಮಾನವಾಗಿ 30 ಸಾವಿರ ರೂ. ನಗದು ಹಾಗೂ ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನ 20 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಲಾಗುವ ದೆಂದು ಅವರು ತಿಳಿಸಿದರು. ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. 9686831055, 9036673407.
ಪಂದ್ಯಾವಳಿಯ ಪ್ರಯುಕ್ತ ಮರುದಿನ ಜ.2 ರಂದು ರಕ್ತದಾನ ಶಿಬಿರವನ್ನು ಕೂಡ ನಡೆಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಕೆ.ಎಂ. ವಿಜು, ಹೆಚ್.ಡಿ. ಕುಮಾರ್ ಉಪಸ್ಥಿತರಿದ್ದರು.