ಪೊನ್ನಂಪೇಟೆ, ಆ. 1: ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಭಾನುವಾರದಂದು ಬಿಟ್ಟಂಗಾಲದ ನಿವೃತ ಮೇ.ಜ ಕೆ.ಪಿ. ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ 4ನೇ ವರ್ಷದ ರಾಜ್ಯ ಮಟ್ಟದ ‘ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ -2016’ರ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತಂಡಗಳು ಸೇರಿದಂತೆ ಒಟ್ಟು 13 ಪ್ರಬಲ ತಂಡಗಳು ಪಾಲ್ಗೊಂಡಿದ್ದ ಹಗ್ಗಜಗ್ಗಾಟ ಸ್ಪರ್ಧೆ, ಸೇರಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ಆರಂಭದಿಂದ ಕೊನೆಯವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕೆಸರು ಗದ್ದೆ ಕ್ರೀಡೋತ್ಸವದ ಆಕರ್ಷಣೆಯಾಗಿ ನಡೆದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ತೀವ್ರ ಹಣಾಹಣಿಯಿಂದ ಕೂಡಿತ್ತು. ಪಾಲ್ಗೊಂಡಿದ್ದ ಎಲ್ಲಾ ತಂಡಗಳು ಎದುರಾಳಿ ತಂಡಕ್ಕೆ ನಿರಂತರವಾಗಿ ಸವಾಲೊಡ್ಡುತಲೇ ಬಂತು. ಎಲ್ಲಾ ತಂಡಗಳು ಬಲಿಷ್ಠ ಮತ್ತು ಕೌಶಲ್ಯ ಪೂರ್ಣ ಸ್ಪರ್ಧಾಳುಗಳೊಂದಿಗೆ ಪೈಪೋಟಿ ಎದುರಿಸಿತ್ತು.
ಆರಂಭದಿಂದಲೆ ತೀವ್ರ ಕುತೂಹಲ ಮೂಡಿಸಿತ್ತಾದರೂ ಸೆಮಿಫೈನಲ್ಸ್ನಿಂದಾಚೆಗೆ ಸ್ಪರ್ಧೆ ಮತ್ತಷ್ಟು ರಂಗೇರಿತು. ಮೊದಲ ಸೆಮಿ ಫೈನಲ್ಸ್ ಸ್ಪರ್ಧೆಯು ಮದೆನಾಡು ಕಾಫಿಲಿಂಕ್ಸ್ ತಂಡ ಮತ್ತು ಗೋಣಿಕೊಪ್ಪಲಿನ ಭಗತ್ ಸಿಂಗ್ ಯುವಕ ಸಂಘದ ನಡುವೆ ನಡೆದು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿತು. ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಹಿರಿಯ ಮತ್ತು ಅನುಭವಿ ಸದಸ್ಯರನ್ನೊಳಗೊಂಡ ಕೊಡಗು ಪೊಲೀಸ್ ತಂಡ ಮತ್ತು ನುರಿತ ಸ್ಪರ್ಧಾಳುಗಳನೊಳಗೊಂಡ ಕಗ್ಗೋಡ್ಲುವಿನ ಅಂಬೇಡ್ಕರ್ ಯುವಕ ಸಂಘ ತಂಡದ ನಡುವೆ ನಡೆದ 2ನೇ ಸೆಮಿಫೈನಲ್ಸ್ ಸ್ಪರ್ಧೆಯಂತು ತೀವ್ರ ರೋಮಾಂಚನಕಾರಿಯಾಗಿತ್ತು. 2 ತಂಡಗಳು ಆಗಿಂದಾಗೆ ಪ್ರಾಬಲ್ಯ ಮೆರೆಯತೊಡಗಿತ್ತು. ಆದರೂ ಕಗ್ಗೋಡ್ಲು ತಂಡದ ವಿರುದ್ಧ ಕೊಡಗು ಪೊಲೀಸ್ ತಂಡಕ್ಕೆ ಕೊನೆಗೂ ಜಯ ಸಾಧಿಸಲು ಸಾಧ್ಯವಾಗಲೇ ಇಲ್ಲ.
ಕೊನೆಗೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯ ಫೈನಲ್ಸ್ ಸ್ಪರ್ಧೆಯು ಪ್ರೇಕ್ಷಕರ ನಿರೀಕ್ಷೆಯಂತೆ ತೀವ್ರ ಹೊರಾಟದಿಂದ ಕೂಡಿತ್ತು. ಫೈನಲ್ಸ್ ಸ್ಪರ್ಧೆಯನ್ನು ಕಣ್ಣು ತುಂಬಿಕೊಳ್ಳಲು ಗಂಟೆಗಟ್ಟಲೆ ಕಾದು ನಿಂತ ಸಾವಿರಾರು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದ 2 ಪ್ರಬಲ ತಂಡ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಪ್ರಶಸ್ತಿ ಯಾರೇ ಗೆದ್ದರೂ ಜನತೆಗೆ ಉತ್ತಮ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ 2 ತಂಡಗಳು ಪಾತ್ರವಾಯಿತು. ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳ ನಿರಂತರ ಪ್ರೋತ್ಸಾಹದೊಂದಿಗೆ ಕೆಸರಿಗಿಳಿದು ಸ್ಪರ್ಧೆ ಆರಂಭಿಸಿದ ಉಭಯ ತಂಡಗಳು ಪ್ರಬಲ ಹೋರಾಟವನ್ನು ಮುಂದುವರಿಸಿತ್ತು. ಅತ್ಯುತ್ತಮ ತರಬೇತುದಾರರೊಬ್ಬರನ್ನು ಹೊಂದಿದ್ದ ಮಳೆ ನಾಡು ಕಾಫಿಲಿಂಕ್ಸ್ ತಂಡ ಚಾಣಾಕ್ಷದಿಂದಲೇ ಪ್ರದರ್ಶನ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದರಲ್ಲೂ ತರಬೇತುದಾರನ ಉತ್ಸಾಹ ಎಲ್ಲಾರ ಗಮನ ಸೆಳೆಯುತ್ತಿತ್ತು.
ಫೈನಲ್ಸ್ನ ಮೊದಲ ಸುತ್ತಿನಲ್ಲಿ 8 ನಿಮಿಷ 42 ಸೆಕೆಂಡ್ ಸಮಯದವರೆಗೆ 2 ತಂಡಗಳು ಹಗ್ಗವನ್ನು ಒಂದಿಂಚೂ ಅಲುಗಾಡಲು ಬಿಡಲಿಲ್ಲ. ಬಳಿಕ ನಡೆದ 2ನೇ ಸುತ್ತಿನಲ್ಲೂ ಸಾಹಸ ಮೆರೆದ 2 ತಂಡಗಳು 9 ನಿಮಿಷ 14 ಸೆಕೆಂಡ್ಗಳ ಕಾಲ ಹಗ್ಗವನ್ನು ಹಿಡಿದಂತೆಯೇ ಹಿಡಿದು ರೋಮಾಂಚಕ ಪ್ರದರ್ಶನ ನೀಡಿತಲ್ಲದೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿತ್ತು. ಇದು ಕೆಸರು ಗದ್ದೆಕ್ರೀಡೆಯಲ್ಲಿ ಹೊಸ ದಾಖಲೆಯನ್ನು ಸೃಷ್ಠಿಸಿತ್ತು. ಬಳಿಕ 9 ನಿಮಿಷ 13 ಸೆಕೆಂಡ್ ಸಮಯದಿಂದ ಹಗ್ಗವನ್ನು ತನ್ನತ್ತ ಕೊಂಚ ಎಳೆದ ಮದೆನಾಡು ಕಾಫಿಲಿಂಕ್ಸ್ ತಂಡ ನಂತರ ವಿಜಯದ ಮೆಟ್ಟಿಲೇರತೊಡಗಿತ್ತು. ಇದರಿಂದ ಕಗ್ಗೋಡ್ಲು ತಂಡ ಎದುರಾಳಿ ತಂಡದ ವಿರುದ್ಧ ಶರಣಾಗುವದಲ್ಲದೇ ಬೇರೆ ಮಾರ್ಗವಿಲ್ಲದಾಯಿತು. ಹಗ್ಗಜಗ್ಗಾಟ ಸ್ಪರ್ಧೆಯ ಫೈನಲ್ಸ್ನ್ನು ವೀಕ್ಷಿಸಲು ಸೇರಿದ್ದ ಪ್ರೇಕ್ಷಕರ ಪೈಕಿ ಹಲವರು ತಮ್ಮ ಮೊಬೈಲ್ ಕ್ಯಾವiರಾಗಳಲ್ಲಿ ವಿಡಿಯೋ ಚಿತ್ರಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.