ಮಡಿಕೇರಿ, ನ. 7: ನಾಡಿನ ಕಾಲೇಜುಗಳಲ್ಲಿ ದೇಶೀಯ ಸಾಂಸ್ಕøತಿಕ ವಾತಾವರಣವನ್ನು ಪುನರ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ರಂಗಾಯಣಗಳ ಸಹಕಾರದೊಂದಿಗೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ದಿಶೆಯಲ್ಲಿ “ಅಂತರ ಕಾಲೇಜು ನಾಟಕ ಮತ್ತು ಜನಪದೋತ್ಸವ ಸ್ಪರ್ಧೆ”ಯನ್ನು ರಾಜ್ಯದಾದ್ಯಂತ ಆಯೋಜಿಸಲಾಗಿದೆ.

ರಂಗಾಯಣ ಮೈಸೂರು ವಲಯ: ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ ಜಿಲ್ಲೆಗಳ ವಿದ್ಯಾರ್ಥಿಗಳು ಕಾಲೇಜುಗಳ ಮುಖ್ಯಸ್ಥರು ಆಯಾಯ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅಥವಾ ಮೈಸೂರು ರಂಗಾಯಣದ ಕಚೇರಿಯಿಂದ ನಿಗದಿತ ಅರ್ಜಿಯನ್ನು ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ರಂಗಾಯಣ, ಮೈಸೂರು ಇವರಿಗೆ ಮಾತ್ರ ಕಳುಹಿಸುವದು. ಮೊದಲು ಬಂದವರಿಗೆ ಮೊದಲ ಆದ್ಯತೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕೇವಲ ಎಂಟು ತಂಡಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು ಪಡೆಯಲು ತಾ. 10 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸಲು ತಾ. 15 ಕೊನೆಯ ದಿನವಾಗಿದೆ. ಅಂತಿಮ ಕಾಲೇಜುಗಳ ಆಯ್ಕೆ ಮಾಡುವ ಹಕ್ಕನ್ನು ರಂಗಾಯಣ ನಿರ್ದೇಶಕರ ತೀರ್ಮಾನಕ್ಕೆ ಕಾಯ್ದಿರಿಸಲಾಗಿದೆ.

ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯ ಹಂತಗಳು: ಜಿಲ್ಲಾ ಮಟ್ಟ (ಆಯಾಯ ಜಿಲ್ಲೆಯಲ್ಲಿ ಡಿಸೆಂಬರ್ ಮೂರು ಮತ್ತು ನಾಲ್ಕನೇ ವಾರ ನಡೆಯುತ್ತದೆ). ವಿಭಾಗೀಯ ಮಟ್ಟ (ಜನವರಿ-2017ನೇ ಮೊದಲ ವಾರ ಅಥವಾ ಕೊನೆಯ ವಾರ), ರಾಜ್ಯ ಮಟ್ಟ (ಸ್ಥಳ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುವದು).

ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಂಟು ಕಾಲೇಜುಗಳಿಗೆ ಸ್ಪರ್ಧೆಯನ್ನು ನಡೆಸಿ ಎರಡು ತಂಡಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವದು. ಆಯ್ಕೆಗೊಂಡ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರಮಾಣ ಪತ್ರವನ್ನು ನೀಡಲಾಗುವದು. ಹೆಚ್ಚಿನ ಮಾಹಿತಿಗೆ ರಂಗಾಯಣದ ಕಚೇರಿ ಮತ್ತು ರಂಗಾಯಣ ವೆಬ್ ಸೈಟ್ ವೀಕ್ಷಣೆಯನ್ನು ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ ದೂರವಾಣಿ ಸಂಖ್ಯೆ: 08272-228490 ರಲ್ಲಿ ಕಚೇರಿ ವೇಳೆಯಲ್ಲಿ ಹಾಗೂ ಈ. ರಾಜು, ಅಧ್ಯಕ್ಷರು, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆ, ಕುಶಾನಗರ, ಮೊಬೈಲ್: 9900313896 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಳ್ಳಯ್ಯ ತಿಳಿಸಿದ್ದಾರೆ.