ಮಡಿಕೇರಿ, ಜ. 16: ರಾಜ್ಯಮಟ್ಟ ದಲ್ಲಿ ನಡೆಯುವ ಕಲಾಶ್ರೀ ಸ್ಪರ್ಧೆಗೆ ಜಿಲ್ಲೆಯಿಂದ ಇಂದು ಎಂಟು ಮಕ್ಕಳ ಆಯ್ಕೆ ನಡೆಯಿತು. ನಗರದ ಶಿಶು ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ ಆಯ್ಕ ಕಾರ್ಯಕ್ರಮವನ್ನು ಕೇಂದ್ರ ಕಚೇರಿ ಸಹಾಯಕ ರಾಜ್‍ಕುಮಾರ್ ಉದ್ಘಾಟಿಸಿದರು.ಪ್ರಾಸ್ತಾವಿಕವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಮಾತನಾಡಿ, ತಾಲೂಕು ಮಟ್ಟದಿಂದ ಆಯ್ಕೆಗೊಂಡ ಕಲಾವಿದರ ಆಯ್ಕೆ ಇಂದು ನಡೆಯುತ್ತಿದ್ದು, ವಿಜೇತರನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳ ಪ್ರತಿಭೆ ಹೊರಬರಲು ಇದು ಉತ್ತಮ ಅವಕಾಶವಾದರೂ ಶಾಲೆಗಳು ಅವರನ್ನು ಸ್ಪರ್ಧೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.ಜಿಲ್ಲಾ ಅಂಗವಿಕಲ ಇಲಾಖೆಯ ಅಧಿಕಾರಿ ಜಗದೀಶ್ ಮಾತನಾಡಿ, ಕಲಾಶ್ರೀ ಸ್ಪರ್ಧೆ ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದ್ದು, ಜಿಲ್ಲಾ ಮಟ್ಟಕ್ಕೆ 24 ವಿದ್ಯಾರ್ಥಿಗಳು ಆಯ್ಕೆ ಆಗಿರುವದಾಗಿ ಹೇಳಿದರು.ಅಧ್ಯಕ್ಷತೆಯನ್ನು ‘ಶಕ್ತಿ’ ಸಂಪಾದಕ ಬಿ.ಜಿ. ಅನಂತ ಶಯನ ವಹಿಸಿದ್ದರು. ವಿದ್ಯಾರ್ಥಿಗಳು ಕಲೆಯನ್ನು ಸ್ಪರ್ಧೆಗಾಗಿ ರೂಢಿಸಿಕೊಳ್ಳದೆ, ಅದು ಸಂಸ್ಕøತಿಯ ಒಂದು ಅಂಗ ಎಂದು ಪ್ರೀತಿ ಮತ್ತು ಗೌರವದಿಂದ ಅಭ್ಯಸಿಸಬೇಕೆಂದರು. ಮಹಿಳಾ ಮೇಲ್ವಿಚಾರಕಿ ಶೀಲ ವಂದನಾರ್ಪಣೆ ಮಾಡಿದರು. ತೋಟಗಾರಿಕಾ ಇಲಾಖೆಯ ಗಣೇಶ್ ವೇದಿಕೆಯಲ್ಲಿ ದ್ದರು. ಎಸಿಡಿಪಿಒ ಮೇಪಾಡಂಡ ಸವಿತಾ ನಿರೂಪಣೆ ಮಾಡಿದರು.