ಕೂಡಿಗೆ, ಸೆ. 8: ಕೂಡಿಗೆಯ ವೈಎಫ್ಎ ಸಂಘದ ವತಿಯಿಂದ ಪ್ರಥಮ ವರ್ಷದ ದಿ. ಲೋಕೇಶ್ ಮತ್ತು ರಶೀದ್ ಜ್ಞಾಪಕಾರ್ಥವಾಗಿ ಹಾಗೂ ಗೌರಿ-ಗಣೇಶ ಮತ್ತು ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ ಕೂಡಿಗೆಯ ಸರ್ಕಲ್ನ ಮೈದಾನದಲ್ಲಿ ನಡೆಯಿತು.ಸ್ಥಳೀಯ ಗುತ್ತಿಗೆದಾರ ಅಜೀಜ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಂಭುಗೌಡ, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ವೈ. ರವಿ, ರಾಮಚಂದ್ರ, ಮಾಜಿ ಸದಸ್ಯ ಅರುಣ್ ರಾವ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವೈಎಫ್ಎ ಸಂಘದ ಅಧ್ಯಕ್ಷ ಕೆ.ಎ. ಪೀಟರ್ ವಹಿಸಿದ್ದರು. ಪಂದ್ಯಾವಳಿಯಲ್ಲಿ ಹತ್ತು ತಂಡಗಳು ಭಾಗವಹಿಸಿ ಕೂಡಿಗೆ ಹಾಗೂ ಸುತ್ತಮುತ್ತಲಿನ ವಾಲಿಬಾಲ್ ಕ್ರೀಡಾಭಿಮಾನಿಗಳಿಗೆ ಕ್ರೀಡಾ ರಸದೌತಣ ನೀಡಿದರು.
ಪಂದ್ಯಾಟದ ಫೈನಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ರಘು ಮತ್ತು ಬೋಪಯ್ಯ ಫ್ರೆಂಡ್ಸ್ ಬೆಂಗಳೂರು ತಂಡ ಗಳಿಸಿ, 25,000 ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನವನ್ನು ಶ್ರೀನಿಧಿ ಸ್ಪೋಟ್ರ್ಸ್ (ಶಿರಂಗಾಲ) ಮಂಗಳೂರು ತಂಡ ಗಳಿಸಿ, 15,000 ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ತೃತೀಯ ಸ್ಥಾನ ಮನು ಆರ್ಮಿ ಕೆ. ಬಸವನಹಳ್ಳಿ 8000 ಹಾಗೂ ಟ್ರೋಫಿ ಹಾಗೂ ಚತುರ್ಥ ಸ್ಥಾನವನ್ನು ವಿಜಯ ಪ್ರೆಂಡ್ಸ್ ಕೆ.ಆರ್. ನಗರ 5000 ನಗದು ಹಾಗೂ ಟ್ರೋಫಿ ಪಡೆದುಕೊಂಡವು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎ. ಪೀಟರ್ ವಹಿಸಿ ಮಾತನಾಡಿ, ಗ್ರಾಮಾಂತರ ಮಟ್ಟದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನಡೆಸಲು ಸಾರ್ವಜನಿಕರ ಸಹಕಾರ ಮುಖ್ಯ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯ ಮೂಲಕ ಎಲ್ಲರೂ ಒಂದೆಡೆ ಸೇರಿ ಸ್ನೇಹ ಹಾಗೂ ಭ್ರಾತೃತ್ವ ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಎಂ.ಪಿ.ಕೆ. ಗ್ರೂಪ್ನ, ಕೆ.ಕೆ. ಹೇಮಂತ್ ಕುಮಾರ್ ಸೇರಿದಂತೆ ವೈ.ಎಫ್.ಎ. ತಂಡದ ಪದಾಧಿಕಾರಿಗಳ ನೇತೃತ್ವದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿತು.
ಇದೇ ವೇಳೆ ರಾಜ್ಯಮಟ್ಟದ ವಾಲಿಬಾಲ್ ಆಟಗಾರರಾದ ಹೆಚ್.ಕೆ. ನಾಗೇಶ್, ಅಸ್ಟೀನ್ ಪಿಂಟೋ, ಎನ್.ಕೆ. ಚಂದ್ರಶೇಖರ ಶೆಟ್ಟಿ, ಎಂ.ಎಸ್. ಸುಂದರ್, ಹಿರಿಯ ಗ್ರಾಮಸ್ಥ ಆರ್.ಕೆ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು.