ಸೋಮವಾರಪೇಟೆ, ಜ. 28: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಮತ್ತು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆಯೋಜಿಸಿ ರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಮತ್ತು ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಮಾತನಾಡಿ, ಪ್ರತಿಭೆ ಎನ್ನುವದು ಪ್ರತಿಯೊಬ್ಬ ಕ್ರೀಡಾ ಸಾಧಕನ ಸೊತ್ತು. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವದು ಒಬ್ಬ ಕ್ರೀಡಾಪಟುವಿನ ಕರ್ತವ್ಯ ವಾಗಬೇಕು ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಕಾಂಗ್ರೆಸಿನ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಪೂಣಚ್ಚ ಮಾತನಾಡಿ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ನೆನಪಿನಲ್ಲಿ ಕಳೆದ 30 ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸುತ್ತಿರುವ ಇಂದಿರಾಗಾಂಧಿ ಅಭಿಮಾನಿ ಸಂಘದ ಸದಸ್ಯರು ಇತರರಿಗೆ ಮಾದರಿ ಯಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಳೂರು ಗ್ರಾಮ ಪಂಚಾಯಿತಿ ಸದಸ್ಯ ಯೋಗೇಂದ್ರ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಖಜಾಂಚಿ ಎಸ್.ಎ. ಮುರಳೀಧರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಸಿ.ಎಸ್. ನಾಗರಾಜ್, ಐಗೂರಿನ ಕೆ.ಎಸ್. ಮುತ್ತಪ್ಪ, ವಿದ್ಯುಚ್ಛಕ್ತಿ ಮಂಡಳಿಯ ನಾಮ ನಿರ್ದೇಶನ ಸದಸ್ಯ ಲಿಂಗರಾಜು, ಕ್ರೀಡಾಕೂಟದ ತೀರ್ಪುಗಾರರಾದ ಇಶಾಕ್, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್ ಉಪಸ್ಥಿತರಿದ್ದರು.