ಬೆಂಗಳೂರು, ಜು. 13: ತಾವಾಗಿ ರಾಜೀನಾಮೆ ನೀಡಿದರೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಗೌರವ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅಭಿಪ್ರಾಯಿಸಿದ್ದಾರೆ.ವಿಧಾನ ಪರಿಷತ್‍ನಲ್ಲಿಂದು ಮಾತನಾಡಿದ ಅವರು, ಗಣಪತಿ ಅವರು ಆತ್ಮಹತ್ಯೆಮಾಡಿಕೊಳ್ಳುವ ಮುನ್ನ ಮಾಧ್ಯಮದೊಂದಿಗೆ 45 ನಿಮಿಷಗಳ ಕಾಲ ಮಾತನಾಡಿ, ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹೇಳಿಕೆಯಲ್ಲಿ ಬೇರೆ ಯಾವದೇ ಸಚಿವರ ಹೆಸರನ್ನು ಹೇಳದೆ ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿ ಗಣಪತಿ ಅವರ ಹೇಳಿಕೆಯಿರುವ ಸೀಡಿಯನ್ನು ಸಭಾಪತಿಗಳಿಗೆ ನೀಡಿದರು. ಹಿಂದೆ ಹವಾಲ ಹಗರಣದಲ್ಲಿ ಸಂಸದರಾಗಿದ್ದ ಎಲ್.ಕೆ. ಅಡ್ವಾಣಿ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆ ಮುಕ್ತಾಯವಾದ ಮೇಲೆ ಮತ್ತೆ ಸಂಸದರಾಗಿ ಆಯ್ಕೆಯಾದರು. ಅದೇ ರೀತಿ ಜಾರ್ಜ್ ಅವರು ಕೂಡ ರಾಜೀನಾಮೆ ನೀಡಿದರೆ, ಅವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೌರವ ಸಿಗಲಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ವಿರುದ್ಧ ಯಾರಾದರೂ ಹೇಳಿಕೆ ನೀಡಿದರೆ, ಅವರು ವಿರೋಧಿಗಳ ಬೆನ್ನು ತಟ್ಟುತ್ತಿದ್ದರು. ಅದು ಕೊಡಗಿನವರ ಗುಣ. ಮುಖ್ಯಮಂತ್ರಿಗಳು ಇಂತಹ ಗುಣ ಅಳವಡಿಸಿಕೊಳ್ಳಬೇಕು. ಮಸಲತ್ತು ಮಾಡಬಾರದೆಂದು ಹೇಳಿದರು.

ವಿಧಾನ ಪರಿಷತ್‍ಗೆ ಆಯ್ಕೆಯಾದ ಸಂದರ್ಭ ನೀಡಿದ ತರಬೇತಿಯಲ್ಲಿ ಮುಖ್ಯಮಂತ್ರಿಗಳು ಶಾಸಕರುಗಳಿಗೆ ಬದ್ಧತೆ ಹಾಗೂ ಸಿದ್ಧತೆ ಇರಬೇಕೆಂದು ಹೇಳಿದ್ದರು.

ಇದೀಗ ಜಾರ್ಜ್ ಅವರನ್ನು ರಕ್ಷಿಸಲು ಬದ್ಧತೆ ಹಾಗೂ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಹುಶಃ ಮುಖ್ಯಮಂತ್ರಿಗಳು ಇದನ್ನೇ ಹೇಳಿರಬೇಕೆಂದು ವ್ಯಂಗ್ಯವಾಡಿದರು.

-ಚಂದ್ರಿಕಾ ರವಿಕುಮಾರ್