*ಸಿದ್ದಾಪುರ, ಜ. 3: ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯಾಗುತ್ತಲೇ ಮೇಯಲು ಬಿಟ್ಟ ದನ-ಕರುಗಳು.., ಕುರಿಗಳು ಸಾಲು ಸಾಲಾಗಿ ತಮ್ಮ ವಾಸಸ್ಥಾನಗಳಿಗೆ ತೆರಳುವ ಚಿತ್ರಣ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಇದೀಗ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಾಣಸಿಗುವದು ಅಪರೂಪ.., ಅದರ ಬದಲಿಗೆ ಇದೀಗ ಕಾಡಾನೆಗಳ ಹಿಂಡು ಎಲ್ಲೆಡೆ ರಾಜಾರೋಷವಾಗಿ ತಿರುಗಾಡುತ್ತಿರುವದು ಸಾಮಾನ್ಯವಾಗಿಬಿಟ್ಟಿದೆ. ಹಗಲು-ರಾತ್ರಿಯೆನ್ನದೆ ಕಾಡು-ರಸ್ತೆಯ ಪರಿಮಿತಿಯಿಲ್ಲದೆ ಆನೆಗಳು ಸಂಚರಿಸುತ್ತಿರುತ್ತವೆ.ಇಂದು ಸಂಜೆ 5 ಗಂಟೆ ವೇಳೆಗೆ ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಟಾಟಾ ಸಂಸ್ಥೆಗೆ ಸೇರಿದ ಕಾನನ್‍ಕಾಡು ತೋಟದಿಂದ ಒಂದು ಮರಿ ಆನೆ ಸೇರಿದಂತೆ ಒಟ್ಟು 9 ಆನೆಗಳ ಹಿಂಡು ರಾಜಾರೋಷವಾಗಿ ಮುಖ್ಯ ರಸ್ತೆಗೆ ಆಗಮಿಸಿ ತೆರಳುತ್ತಿದ್ದುದು ಕಂಡುಬಂದಿತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜಾನಕಿ ಎಂಬವರು ದಿಢೀರಾಗಿ ಎದುರಾದ ಆನೆಗಳ ಹಿಂಡನ್ನು ಕಂಡು ಗಾಬರಿಯಿಂದ ಓಡಿ ಹೋಗಿ ಎದ್ದು, ಬಿದ್ದು ಗಾಯಗಳಾಗಿವೆ. ದ್ವಿಚಕ್ರ ವಾಹನ ಸವಾರರು ಗಾಬರಿಯಿಂದ ಬಿದ್ದು, ಎದ್ದು ಓಡಿದ್ದಾರೆ. ಕೆಲವು ವಾಹನ ಚಾಲಕರು ಗಾಬರಿಯಿಂದ ಅತ್ತ ಮುಂದಕ್ಕೂ ಚಲಿಸಲಾಗದೆ ಇತ್ತ ಹಿಂದಕ್ಕೂ ತೆರಳಲಾಗದೆ ಜೀವ ಕೈಯಲ್ಲಿಡಿದು ಪರದಾಡಿದ ಪ್ರಸಂಗ ಕೂಡ ನಡೆದಿದೆ.

ಸಂಜೆ 4 ಗಂಟೆ ವೇಳೆಗೆ ಆಗಿದ್ದರೆ ಶಾಲೆ ಬಿಡುವ ಸಮಯವಾಗಿದ್ದು, ಪುಟ್ಟ ಮಕ್ಕಳು ತೋಟದಲ್ಲಿ ಸಂಚರಿಸುತ್ತಿದ್ದರು. ಸದ್ಯ ಅಪಾಯ ತಪ್ಪಿದಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಅಂಚೆಮನೆ ಸುಧಿ