ಮಡಿಕೇರಿ, ಜು. 13 : ಡಿವೈಎಸ್‍ಪಿ ಗಣಪತಿ ಅವರ ಸಾವಿನ ಪ್ರಕರಣವನ್ನು ರಾಜಕೀಯ ದಾಳವನ್ನಾಗಿ ಪ್ರಯೋಗಿಸದೆ, ಸಿಐಡಿ ತನಿಖೆ ಪೂರ್ಣಗೊಳ್ಳುವವರೆಗೆ ತಾಳ್ಮೆಯಿಂದ ಕಾಯುವಂತೆ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಎಸ್.ವೈ ಗುರುಶಾಂತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಅವರ ಸಾವಿನ ಪ್ರಕರಣ ವಿಷಾದಕರ ಮತ್ತು ದುರಂತ ಘಟನೆ. ಆದರೆ, ವಿವಾದವನ್ನು ವಿಸ್ತಾರ ಗೊಳಿಸುತ್ತಿರುವದು ಸರಿಯಾದ ಕ್ರಮವಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಭರವಸೆ ನೀಡಿದ್ದು, ತನಿಖಾ ವರದಿ ಬರುವವರೆಗೆ ಕಾಯುವದು ಸೂಕ್ತವೆಂದರು.

ದೇವಟ್ ಪರಂಬು ಎನ್ನುವ ವಿವಾದದಲ್ಲೂ ಬಿಜೆಪಿ ರಾಜಕೀಯ ದುರ್ಲಾಭ ಪಡೆಯಲೆತ್ನಿಸುತ್ತಿದೆ. ದುಸ್ಥಿತಿಯ ಹಾದಿಯಲ್ಲಿ ಸಾಗುತ್ತಿರುವ ಬಿಜೆಪಿ ಟಿಪ್ಪು ಹೆಸರಿನ ಮೂಲಕ ಸಮಾಜದಲ್ಲಿ ಒಡಕು ಮೂಡಿಸುತ್ತಿದೆ ಯೆಂದು ಗುರುಶಾಂತ್ ಆರೋಪಿಸಿದರು.

ಸಿಪಿಐಎಂ ಪಕ್ಷದ ವತಿಯಿಂದ ವಿವಾದದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸ್ಥಳೀಯರೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಆದರೆ, ಸ್ಥಳೀಯರಿಗೆ ಈ ವಿವಾದದ ಅಗತ್ಯವಿಲ್ಲ. ಕೆಲವರಿಗೆ ಮಾತ್ರ ಇದು ಬೇಕಾಗಿದ್ದು, ಕೆಣಕುವ ಪ್ರಯತ್ನ ನಡೆಯುತ್ತಿದೆ. ಮಹತ್ ಸಾಧನೆಗಳು ನಡೆದಿದ್ದರೆ ಸ್ಮಾರಕವನ್ನು ನಿರ್ಮಿಸಬಹುದಿತ್ತು. ದೇವಟ್ ಪರಂಬು ಎನ್ನುವ ಪ್ರದೇಶದ ಉಲ್ಲೇಖಕ್ಕೆ ದಾಖಲೆಗಳೇ ಇಲ್ಲವೆಂದು ಆರೋಪಿಸಿದ ಗುರುಶಾಂತ್, ಕೆಲವರು ಇತಿಹಾಸದ ಒಳಹೊಕ್ಕು ತಪ್ಪುಗಳನ್ನೆಲ್ಲ ಸರಿಪಡಿಸುತ್ತೇವೆಂದು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ವಿರುದ್ಧ ಪ್ರತಿಭಟನೆ : ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗುರುಶಾಂತ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಉದ್ಯೋಗ ಸೃಷ್ಟಿಯ ವೈಫಲ್ಯತೆಯನ್ನು ಖಂಡಿಸಿ ತಾ.17 ರಿಂದ 25ರವರೆಗೆ ರಾಜ್ಯಾದ್ಯಂತ ಪ್ರಚಾರಾಂದೋಲನ ಹಾಗೂ ಪ್ರತಿಭಟನೆಗಳನ್ನು ನಡೆಸುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ| ದುರ್ಗಾ ಪ್ರಸಾದ್, ಪ್ರಮುಖರಾದ ಸಾಬು ಮತ್ತು ವೈ.ಕೆ. ಗಣೇಶ್ ಉಪಸ್ಥಿತರಿದ್ದರು.