ಶನಿವಾರಸಂತೆ, ಡಿ. 29: ಸಂಪರ್ಕ ರಸ್ತೆ ಮಧ್ಯೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಹೊಂಡ ತೆಗೆದು ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದನ್ನು ಗ್ರಾಮಸ್ಥರು ವಿರೋಧಿಸಿ ಪ್ರತಿಭಟಿಸಿದ ಘಟನೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಬಿದರೂರು ಕಾಲೋನಿಯಲ್ಲಿ ನಡೆದಿದೆ.
ರಸ್ತೆ ಮಧ್ಯೆ ಹೊಂಡ ತೆಗೆಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೆಲಸ ನಿಲ್ಲಿಸುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸುವವರೆಗೂ ಕೆಲಸ ನಿಲ್ಲಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯೆ ಎನ್.ಕೆ. ಸುಮತಿ, ಬಾಲಕೃಷ್ಣಾಚಾರ್, ಮೋಹನ್ ಕುಮಾರ್, ಎಸ್.ಕೆ. ಮೂರ್ತಿ, ಕಿರಣ್ ಮತ್ತಿತರರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ ಪರಿಶೀಲನೆ ನಡೆಸಿದರು.
ಖಾಸಗಿ ವ್ಯಕ್ತಿಯಿಂದ ದಂಡ ವಸೂಲಿ ಮಾಡಿ, ಚರಂಡಿ ನಿರ್ಮಿಸಿಕೊಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.