ಮಡಿಕೇರಿ, ಜ. 18: ಮಡಿಕೇರಿ ನಗರ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ತೆರವುಗೊಳಿಸುವದು ಹಾಗೂ ಈಗಾಗಲೇ ಪರಿಷ್ಕರಣೆ ಮಾಡಲಾಗಿರುವ ನೀರಿನ ತೆರಿಗೆಯನ್ನು ರದ್ದುಪಡಿಸುವಂತೆ ಮಡಿಕೇರಿ ನಗರಸಭೆ ತೀರ್ಮಾನ ಕೈಗೊಂಡಿದೆ.ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ರಮೇಶ್ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಹಲವಾರು ಅಂಗಡಿಗಳು ತಲೆಯೆತ್ತಿದ್ದು, ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಹೊರಗಿನವರು ಬಂದು ವ್ಯಾಪಾರ ಮಾಡುತ್ತಿದ್ದಾರೆ. ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಸದಸ್ಯ ನಂದಕುಮಾರ್ ಮಾತನಾಡಿ, ಯಾವದೇ ಕಾರಣಕ್ಕೂ ಹೊರಗಿನವರು ಇಲ್ಲಿ ಬಂದು ವ್ಯಾಪಾರ ಮಾಡಬಾರದೆಂದು ಹೇಳಿದರು. ಸದಸ್ಯ ಪಿ.ಡಿ. ಪೊನ್ನಪ್ಪ ಅವರು ಆಸ್ಪತ್ರೆ ಬಳಿ ಟಂಡರ್ ಕರೆದು ನಡೆಸುತ್ತಿರುವ ಕ್ಯಾಂಟೀನ್ ಇದ್ದು, ಅದರ ಬಳಿಯಲ್ಲೇ ಎರಡು ಅನÀಧಿಕೃತ ಕ್ಯಾಂಟೀನ್‍ಗಳು ತಲೆ ಎತ್ತಿವೆ. ಹೀಗಾದರೆ ಲಕ್ಷ ಹಣ ಪಾವತಿಸಿರುವ ಕ್ಯಾಂಟೀನ್ ಮಾಲೀಕರ ಪಾಡೇನು ಎಂದು ಪ್ರಶ್ನಿಸಿದರು.

ಸದಸ್ಯೆ ವೀಣಾಕ್ಷಿ ಮಾತನಾಡಿ, ರಾಜಾಸೀಟ್ ಬಳಿ ನಗರಸಭೆಗೆ ಸೇರಿದ ಜಾಗವನ್ನು ಅಲ್ಲಿನ ವ್ಯಾಪಾರಿಗಳು ಇತರರಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕೆಂದರು.

ಸದಸ್ಯ ಚುಮ್ಮಿದೇವಯ್ಯ ಅವರು, ಬಸ್ ನಿಲ್ದಾಣದಿಂದ ಕಾಲೇಜು ರಸ್ತೆವರೆಗೆ ಇರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕು. ಅಸಹ್ಯವಾಗಿ ಕಾಣುತ್ತಿದೆ ಎಂದು ಹೇಳಿದರು. ಸದಸ್ಯ ಪಿ.ಡಿ. ಪೊನ್ನಪ್ಪ ಅವರು ಇಂತಹ ಸಣ್ಣ ಕೆಲಸಗಳಿಗೆ ಆಯುಕ್ತರ ಆದೇಶವನ್ನೇ ಕಾಯದೇ ಅಧಿಕಾರಿ ಗಳೇ ಕ್ರಮಕೈಗೊಳ್ಳಬೇಕೆಂದರು. ಅಂತಿಮವಾಗಿ ರಸ್ತೆ ಬದಿಯ ಅಂಗಡಿಗಳನ್ನು

(ಮೊದಲ ಪುಟದಿಂದ) ತೆರವುಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ತೆರಿಗೆ ಪರಿಷ್ಕರಣೆ ಇಲ್ಲ

ನಗರಸಭಾ ವ್ಯಾಪ್ತಿಯಲ್ಲಿ ನೀರಿನ ತೆರಿಗೆ ಹೆಚ್ಚಿಸಿರುವದನ್ನು ಕೈಬಿಡುವಂತೆ ಇದೇ ಸಂದರ್ಭ ತೀರ್ಮಾನಿಸಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಚುಮ್ಮಿದೇವಯ್ಯ ಅವರು, ಕಟ್ಟಟಗಳ ಕಂದಾಯವನ್ನು 3-4 ವರ್ಷಗಳಿಗೊಮ್ಮೆ ಪರಿಷ್ಕರಿಸುವಂತೆ ಆದೇಶವಿದೆ. ಆದರೆ ನೀರಿನ ತೆರಿಗೆ ಹೆಚ್ಚಿಸುವಂತೆ ಸರಕಾರದಿಂದ ಯಾವದೇ ಆದೇಶ ಅಧಿಸೂಚನೆ ಬಂದಿಲ್ಲ.. ವೀಡಿಯೋ ಕಾನ್ಫರೆನ್ಸ್‍ನಲ್ಲಿ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಆಯುಕ್ತರು ನೀರಿನ ತೆರಿಗೆ ಹೆಚ್ಚಿಸಿದ್ದಾರೆ. ಇದು ಸರಿಯಲ್ಲ. ಇದನ್ನು ಕೈಬಿಡುವಂತೆ ಆಗ್ರಹಿಸಿದರು. ಇದಕ್ಕೆ ಇತರ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಷ್ಕøತ ತೆರಿಗೆಯನ್ನು ಕೈಬಿಟ್ಟು, ಹಿಂದಿನ ತೆರಿಗೆಯನ್ನೇ ಮುಂದುವರೆಸುವಂತೆ ತೀರ್ಮಾನಕೈಗೊಳ್ಳಲಾಯಿತು.

ಕಸ ಸಮಸ್ಯೆ: ನಗರಸಭೆಯಲ್ಲಿ ಯಾವದೇ ವಾಹನಗಳು, ಯಂತ್ರಗಳು ಸರಿ ಇಲ್ಲ. ಜೆಸಿಬಿ, ಕಳೆಕೊಚ್ಚುವ ಯಂತ್ರ ಎಲ್ಲವೂ ದುರಸ್ತಿಯಲ್ಲಿದೆ. ನಗರದಲ್ಲಿ ಕಸ ಎತ್ತುವವರು ಕೂಡ ಇಲ್ಲವೆಂದು ಎಸ್‍ಡಿಪಿಐ ಸದಸ್ಯರುಗಳಾದ ಮನ್ಸೂರ್ ಹಾಗೂ ಪೀಟರ್ ಆಕ್ಷೇಪಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ರಮೇಶ್ ಹಾಗೂ ಉಪಾಧ್ಯಕ್ಷ ಪ್ರಕಾಶ್ ಕಸ ವಿಲೇವಾರಿ ಗುತ್ತಿಗೆ ಪಡೆದ ಟೆಂಡರ್‍ದಾರರು ಕೆಲಸ ಮಾಡಿಸುತ್ತಿಲ್ಲ. ಕೇವಲ ಹಣಕ್ಕಾಗಿ ಮಾತ್ರ ಬರುತ್ತಾರೆ ಎಂದು ದೂರಿದರು. ಸದಸ್ಯ ನಂದಕುಮಾರ್, ಅಧಿಕಾರಿಗಳು ಮತ್ತು ಟೆಂಡರ್‍ದಾರರ ನಡುವೆ ಒಳಒಪ್ಪಂದ ಆಗಿದೆ. ಈ ಬಗ್ಗೆ ಕ್ರಮ ಆಗಬೇಕೆಂದರು. ಸದಸ್ಯೆ ಲಕ್ಷ್ಮಿ ಅವರು ತಮ್ಮ ವಾರ್ಡ್‍ನಲ್ಲಿ ಒಂದು ವಾರದಿಂದ ಕೊಳೆತು ನಾರುತ್ತಿರುವ ಕಸದ ರಾಶಿಯ ಚಿತ್ರವನ್ನು ತೋರಿಸಿದರು.

ಈ ಸಂದರ್ಭ ಆಯುಕ್ತೆ ಶುಭ ಅವರು ಈ ಬಗ್ಗೆ ದೂರು ನೀಡಿದ್ದೀರಾ ಎಂದು ಕೇಳಿದಾಗ ಕುಪಿತರಾದ ರಮೇಶ್ ಕಸವಿಲೇವಾರಿ ಬಗ್ಗೆ ದೂರು ನೀಡಬೇಕು. ಇದು ನಿರಂತರ ಪ್ರಕ್ರಿಯೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಆಯುಕ್ತರು ತಾನೇ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡುವದಾಗಿ ಹೇಳಿದರು. ಇನ್ನುಳಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.