ವೀರಾಜಪೇಟೆ, ಜ. 22: ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕ ಮೃತಪಟ್ಟಿದ್ದು, ಚಾಲಕನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.
ವೀರಾಜಪೇಟೆ- ಗೋಣಿಕೊಪ್ಪಲು ರಸ್ತೆಯ ಅಂಬಟ್ಟಿ ತಿರುವಿನಲ್ಲಿ ಶನಿವಾರ ರಾತ್ರಿ 9.45 ಗಂಟೆಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಸರಕು ಲಾರಿ ಮುಖಾಮುಖಿ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಬಸ್‍ನ ನಿರ್ವಾಹಕ ವಿಜಾಪುರ ಜಿಲ್ಲೆಯವರಾದ ಕಾಳೇ ಪಟೇಲ್ (40) ಎಂಬವರು ಸಾವನ್ನಪ್ಪಿದ್ದಾರೆ.
ಚಾಮರಾಜನಗರ ವಿಭಾಗದ ಗುಂಡ್ಲುಪೇಟೆ ವೀರಾಜಪೇಟೆ ಮಾರ್ಗದ ಬಸ್ (ಎಂ-10-ಈ 016) ಗೋಣಿಕೊಪ್ಪಲು ಕಡೆಯಿಂದ ವೀರಾಜಪೇಟೆಗೆ ಬರುತ್ತಿತ್ತು. ವೀರಾಜಪೇಟೆ ಕಡೆಯಿಂದ ಮೈಸೂರಿಗೆ ಕಾಫಿ ಸಿಪ್ಪೆ ಸಾಗಿಸುತ್ತಿದ್ದ (ಎಂ-12 1377) ಚಾಲಕನ ಅಜಾಗರೂಕತೆ ಯಿಂದಾಗಿ ಬಸ್‍ಗೆ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಬಸ್ ಚಾಲಕ ಶಶಿಧರ್ (27) ಎಂಬವರು ಕಾಲು ಮುರಿತದಿಂದಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದಾರೆ.
ತೀವ್ರ ಪೆಟ್ಟಾಗಿದ್ದ ಕಾಳೇ ಪಟೇಲ್ ಅವರನ್ನು ಮಡಿಕೇರಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಅಪಘಾತದ ನಂತರ ತಲೆ ಮರೆಸಿಕೊಂಡಿದ್ದು, ವೀರಾಜಪೇಟೆ ಗ್ರಾಮಾಂತರ ಪೋಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಮೃತ ಕಾಳೇ ಪಟೇಲ್ ಅವರ ಮೃತದೇಹವನ್ನು ವಿಜಯಪುರಕ್ಕೆ ಇಂದು ಸಾಗಿಸಲಾಯಿತು.