ಕುಶಾಲನಗರ, ನ. 27: ಕುಶಾಲನಗರ ಶ್ರೀ ಗಣಪತಿ ದೇವರ ರಥೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ನೆಹರೂ ಬಡಾವಣೆಯಲ್ಲಿ ಭಾನುವಾರ 96ನೇ ಗೋಪ್ರದರ್ಶನ ಏರ್ಪಡಿಸಲಾಗಿತ್ತು. ಕೊಡಗು ಸೇರಿದಂತೆ ಹಾಸನ, ಮೈಸೂರು ಭಾಗಗಳಿಂದ ರೈತರು 250ಕ್ಕೂ ಅಧಿಕ ಜಾನುವಾರುಗಳನ್ನು ಪ್ರದರ್ಶನಕ್ಕೆ ತಂದಿದ್ದರು.
ಜಾನುವಾರುಗಳ ವಯಸ್ಸಿಗೆ ಅನುಗುಣವಾಗಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಹಳ್ಳಿಕಾರ್ ತಳಿಯ ಎತ್ತುಗಳು ಹೆಚ್ಚಿನ ಸಂಖ್ಯೆ ಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಹಸುಗಳಲ್ಲಿ ಮಿಶ್ರತಳಿ, ಜರ್ಸಿ, ಹೆಚ್.ಎಫ್, ಹಳ್ಳಿಕಾರ್ ಹಾಗೂ ಕಡಸುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜಮುನಾಪುರಿ ಮತ್ತು ಮಲಬಾರಿ ತಳಿಯ ಆಡುಗಳು, ಬನ್ನೂರು ತಳಿಯ ಕುರಿಗಳನ್ನೂ ರೈತರು ಜಾನುವಾರು ಜಾತ್ರೆಗೆ ತಂದಿದ್ದು ವಿಶೇಷವಾಗಿತ್ತು. ಶ್ವಾನ ಪ್ರದರ್ಶನದಲ್ಲಿ 150 ನಾಯಿಗಳನ್ನು ಮಾಲೀಕರು ತಂದು ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದು ನೋಡುಗರಿಗೆ ಮನರಂಜನೆ ನೀಡಿತು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿ.ಆರ್. ಸುರೇಶ್, ಪಶುವೈದ್ಯರಾದ ಡಾ. ಎಸ್.ಎಸ್. ಆನಂದ್, ಡಾ. ಸಂಜೀವ್ಕುಮಾರ್ ಆರ್. ಶಿಂಧೆ ಹಾಗೂ ಪಶುವೈದ್ಯ ಇಲಾಖೆ ಸಹಾಯಕ ಪಾಲಾಕ್ಷ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ನ.29 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಜೇತ ಗೋವುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತ್ಕುಮಾರ್ ತಿಳಿಸಿದರು.
ದೇವಾಲಯ ಸೇವಾ ಸಮಿತಿ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ್ರಾವ್, ನಿರ್ದೇಶಕರಾದ ವಿ.ಪಿ. ಶಶಿಧರ್ ಹಾಗೂ ಎಸ್.ಎನ್. ನರಸಿಂಹಮೂರ್ತಿ ಇದ್ದರು.