ಕುಶಾಲನಗರ, ಜು. 10 : ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮೇಲಧಿಕಾರಿಗಳ ಒತ್ತಡದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿ ಅವರ ಚಿತೆಯ ಬೆಂಕಿ ಇನ್ನೂ ಆರಿಲ್ಲದಿದ್ದರೂ ಈ ನಡುವೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಹೆಂಡತಿ ಮಕ್ಕಳೊಂದಿಗೆ ಕೊಡಗು ಜಿಲ್ಲೆಯ ಐಷರಾಮಿ ರೆಸಾರ್ಟ್ ನಲ್ಲಿ ರಜಾದ ಮಜಾ ಅನುಭವಿಸುತ್ತಿರುವದು ಕಂಡುಬಂದಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕೇಂದ್ರ ಕಚೇರಿಯ ಆಡಳಿತ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್ ಅವರು ಕಳೆದ 2 ದಿನಗಳಿಂದ ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ವಿಶೇಷವೆಂದರೆ ಈ ಅಧಿಕಾರಿ ಪ್ರವಾಸಕ್ಕೆ ಬರುವ ಸಂದರ್ಭ ಹೆಂಡತಿ ಮಕ್ಕಳೊಂದಿಗೆ ಸೈರನ್ ಹೊತ್ತ ಸರ್ಕಾರಿ ಕಾರು, ಸೌಲಭ್ಯ ಸೇರಿದಂತೆ ಭದ್ರತಾ ವಾಹನಗಳೊಂದಿಗೆ ಜಿಲ್ಲೆಯಲ್ಲಿ ಓಡಾಟ ನಡೆಸಿದ್ದೇ ನಡೆಸಿದ್ದು.....! ಹುಚ್ಚನ ಮದುವೇಲಿ ಉಂಡವನೇ ಜಾಣ ಎಂಬಂತೆ.....!
ಆದರೆ ಕನಿಷ್ಟ ಮಾನವೀಯತೆ ಗಾದರೂ ಮಂಗಳೂರು ಪೊಲೀಸ್ ಮಹಾ ನೀರಿಕ್ಷಕರ ಕೇಂದ್ರ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದು, ಆತ್ಮಹತ್ಯೆಗೆ ಶರಣಾದ ಎಂ.ಕೆ ಗಣಪತಿ ಅವರ ಮನೆಗೆ ತೆರಳುವ ಸೌಜನ್ಯ ತೋರದಿರುವದು ನಿಜಕ್ಕೂ ವಿಷಾದನೀಯ ಎನ್ನುವದು ಇಲ್ಲಿನ ಜನತೆಯ ಆಕ್ರೋಶವಾಗಿದೆ.
ಶನಿವಾರ ಕೊಡಗು ಜಿಲ್ಲೆಗೆ ಹೆಂಡತಿ ಮಕ್ಕಳೊಂದಿಗೆ ಸಂಸಾರ ಸಮೇತ ಭದ್ರತೆಯೊಂದಿಗೆ ಸರ್ಕಾರಿ ಕಾರಿನಲ್ಲಿ ಬಂದು ಮಜಾ ಅನುಭವಿಸಿದ ಈ ಅಧಿಕಾರಿ ಇಲ್ಲಿ ನೆಲೆಸಿದ್ದ ಸಂದರ್ಭ ಕೊಡಗಿನ ಬಹುತೇಕ ಪೊಲೀಸ್ ವ್ಯವಸ್ಥೆಯ ಭದ್ರತೆಯಲ್ಲಿ ದಿನ ಕಳೆದರೆ ಇತ್ತ ಕೊಡಗು ಗಡಿಭಾಗದ ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡುವ ಸಂದರ್ಭ ಇವರ ಭದ್ರತೆಗಾಗಿ ಓರ್ವ ಎಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ಗಳು ಸೇರಿದಂತೆ 5 ರಿಂದ 6 ಸರ್ಕಾರಿ ವಾಹನಗಳು ಇವರೊಂದಿಗೆ ಬಂದಿದ್ದು, ನಮ್ಮ ಸರ್ಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಈ ಓಡಾಟವನ್ನು ಗಮನಿಸಿ ಹಿಂಬಾಲಿಸಿದ ‘ಶಕ್ತಿ’ ಪ್ರತಿನಿಧಿ ಈ ಉನ್ನತ ಅಧಿಕಾರಿಯನ್ನು ಮಾತನಾಡಿಸಲು ಪ್ರಯತ್ನಿಸಿದರೆ ಭದ್ರತಾ ಸಿಬ್ಬಂದಿಗಳು ಅವಕಾಶ ಕಲ್ಪಿಸಲು ಕೂಡ ಅಡ್ಡಿ ಮಾಡಿದ್ದೂ ಆಯಿತು. ಪೊಲೀಸ್ ಮೂಲಗಳ ಪ್ರಕಾರ ಈ ಅಧಿಕಾರಿ ಅಧಿಕೃತ ಭೇಟಿ ನೀಡಿದ್ದು ಶನಿವಾರ ಬಂದು ಸಿದ್ದಾಪುರದ ಬಳಿ ರೆಸಾರ್ಟ್ನಲ್ಲಿ ಉಳಿದು ನಂತರ ಸಿದ್ದಾಪುರ ನಂಜರಾಯಪಟ್ಟಣ, ರಂಗಸಮುದ್ರ ಮಾರ್ಗವಾಗಿ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ ಇಂದು ಸಂಜೆ ಬೆಂಗಳೂರಿಗೆ ಹಿಂತಿರುಗಿದ್ದಾರೆ ಎಂದಷ್ಟೆ ತಿಳಿಸಿದ್ದು, ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಗಣಪತಿ ಮನೆಗೆ ತೆರಳಿರುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.