ಗೋಣಿಕೊಪ್ಪಲು, ಅ. 25: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ರಕ್ಷಾಬಂಧನ’ವನ್ನು ಆಚರಿಸಲಾಯಿತು. ಸಹೋದರತ್ವದಂತಹ ಶ್ರೇಷ್ಠ ಭಾವನೆಯ ಪ್ರತೀಕವಾಗಿ ಆಚರಿಸುವ ಈ ಹಬ್ಬ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಉಲ್ಲಾಸವನ್ನುಂಟು ಮಾಡಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸೌಜನ್ಯ, ಸೌಹಾರ್ದಯುತ ಭಾವನೆಗಳ ಮೂಲಕ ಸಹೋದರತ್ವವನ್ನು ಗಟ್ಟಿಗೊಳಿಸಬೇಕು. ದೇಶದ ಐಕ್ಯತೆಯನ್ನು ಮೂಡಿಸಲು ಇಂತಹ ಹಬ್ಬಗಳ ಆಚರಣೆ ಮುಖ್ಯ. ತಂದೆ-ತಾಯಿ, ಬಂಧು-ಬಳಗದಂತಹ ಬಂಧನವನ್ನು ಬೆಸೆಯುವ ಹೊಣೆ ಯುವಜನರ ಮೇಲಿದೆ. ಭಾರತದ ‘ಕುಟುಂಬ’ ವ್ಯವಸ್ಥೆಯ ಪ್ರತೀಕವಾಗಿ ರಕ್ಷ್ಷಾ ಬಂಧನದಂತಹ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇಂತಹ ಹಬ್ಬಗಳು ವಿಶ್ವದಾದ್ಯಂತ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಮತ ಅತಿಥಿಗಳನ್ನು ಸ್ವಾಗತಿಸಿ, ಅಮೃತವರ್ಷಿಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಎ.ಬಿ.ವಿ.ಪಿ. ಘಟಕದ ಉಪಾಧ್ಯಕ್ಷೆ ವಿದ್ಯಾ ಹಾಜರಿದ್ದರು. ಉಪನ್ಯಾಸಕ ಅಕ್ರಂ ಕಾರ್ಯಕ್ರಮ ಸಂಘಟಿಸಿದ್ದರು.