ಮಡಿಕೇರಿ, ಅ. 26: ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಿಡಬೇಕೆಂಬ ಉದ್ದೇಶದಿಂದ ಇಂದು ಇಲ್ಲಿನ ಬಾಲಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ‘ಶಕ್ತಿ’ ಸಂಪಾದಕ ಬಿ.ಜಿ. ಅನಂತ ಶಯನ, ಹುಟ್ಟಿನಿಂದ ಸಾವಿನವರೆಗೂ ಪರಾವಲಂಬನೆಯಿಂದಲೇ ಬದುಕುವ ಮಾನವರು ಸಮಾನತೆ, ಸೌಹಾರ್ದತೆಯನ್ನು ಖಡ್ಡಾಯವಾಗಿ ಅನುಸರಿಸುವಂತಾಗಬೇಕೆಂದರು.ಹಿರಿಯರು ಮತ್ತು ವಿಶೇಷ ಚೇತನರ ಮಂಗಳಕ್ಕೆ ದುಡಿಯುತ್ತಿರುವ ಎನ್.ಜಿ.ಓ.ಗಳು ಮತ್ತು ಸಂಘ-ಸಂಸ್ಥೆಗಳು ಸಮಾಜದ ಆಸ್ತಿ ಎಂದು ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಮಮ್ತಾಜ್ ಹೇಳಿದರು. ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಮಾತನಾಡಿ, ರಕ್ತದಾನದಂತಹ ಸೇವೆ ನಿರಂತರ ನಡೆಯುತ್ತಿರಬೇಕೆಂದರು.
ವೈದ್ಯೆ ನಾಗಲಕ್ಷ್ಮಿ ಅವರು ಮಾತನಾಡಿ, ಸಂಗ್ರಹಿತ ರಕ್ತ ಕೇವಲ 35 ದಿನ ಉಳಿಯುತ್ತದೆ. ಈ ದೃಷ್ಟಿಯಿಂದ ರಕ್ತದಾನ ಶಿಬಿರಗಳು ಪ್ರತಿ ಎರಡು ತಿಂಗಳುಗಳಿಗೊಮ್ಮೆ ನಡೆದರೆ ಉಪಯುಕ್ತ ಎಂದರು. ರಕ್ತದ ಗುಂಪುಗಳಲ್ಲಿ ವೈವಿಧ್ಯವಿದ್ದು, ಹತ್ತಿರದ ರಕ್ತ ಸಂಬಂಧಿಗಳು ರಕ್ತ ಹಂಚಿಕೊಳ್ಳು ವದು ತಪ್ಪು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಅವರು ಮಾತನಾಡಿ, ರಕ್ತ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಲು ಜಾಗೃತಿ ಆಗಬೇಕಿದೆ ಎಂದರು.
ಹರೀಶ್ ಸ್ವಾಗತಿಸಿದರೆ, ಸತೀಶ್ ನಿರೂಪಣೆ ಮಾಡಿದರು. ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಎನ್.ಎಂ. ಜಗದೀಶ್ ಹಾಜರಿದ್ದರು.
ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆಸ್ಪತ್ರೆ, ವಿಕಾಸ್ ವಿಶೇಷ ಚೇತನ ಸಂಸ್ಥೆ, ಸ್ತ್ರೀ ಶಕ್ತಿ ಅಸೋಸಿಯೇಷನ್, ಗ್ರೀನ್ ಡಾಟ್ ಟ್ರಸ್ಟ್, ಜೀವನಾಧಾರಿ ಸಂಸ್ಥೆ, ಸಿ.ಬಿ.ಆರ್. ನೆಟ್‍ವರ್ಕ್ ಮತ್ತು ಸ್ವಸ್ಥ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ಏರ್ಪಡಿಸಲಾಗಿತ್ತು.