ಮಡಿಕೇರಿ, ಜ. 2: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಇಬ್ಬರು ಯೋಧರ ಸುಪರ್ದಿಯಲ್ಲಿದ್ದ ಪೈಸಾರಿ ಜಾಗವನ್ನು ತೆರವುಗೊಳಿಸುವ ಸಂಬಂಧ ಯೋಧರಿಬ್ಬರ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ಅಮ್ಮತ್ತಿಯ ಹಲವು ಸಂಘ - ಸಂಸ್ಥೆಗಳ ಪ್ರಮುಖರು ತಹಶೀಲ್ದಾರ್ ಮಹದೇವಸ್ವಾಮಿ ಅವರನ್ನು ಆಗ್ರಹಿಸಿವೆ.

ಅಮ್ಮತ್ತಿಯ ನಾಡ ಕಚೇರಿಯಲ್ಲಿಂದು ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ, ಅಮ್ಮತ್ತಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುವಿನ್ ಗಣಪತಿ, ನಿವೃತ್ತ ಯೋಧ ಕಾವಡಿಚಂಡ ಗಣಪತಿ ಪ್ರಮುಖರಾದ ಕುಟ್ಟಂಡ ತಿಮ್ಮಯ್ಯ ಮತ್ತಿತರರು ದೇಶಸೇವೆ ಮಾಡಿರುವ ಯೋಧರ ವಿರುದ್ಧ ವಿನಾಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದು ಅವಮಾನವೆಸಗಿದಂತೆ. ಆದ್ದರಿಂದ ಕೂಡಲೇ ಅದನ್ನು ಹಿಂಪಡೆದು ಸರ್ಕಾರದ ಮೂಲಕ ಆ ಪೈಸಾರಿ ಜಾಗವನ್ನು ಅವರಿಗೆ ಒದಗಿಸಿಕೊಡುವಂತೆ ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ತೀರ್ಮಾನ ಕೈಗೊಳ್ಳುವದಾಗಿ ತಹಶೀಲ್ದಾರ್ ಭರವಸೆ ನೀಡಿದರು.(ಮೊದಲ ಪುಟದಿಂದ) ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದವರಾದ ಪಟ್ಟಡ ಕರುಂಬಯ್ಯ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹಾಗೂ ಇವರ ಸೋದರ ಸಂಬಂಧಿ ಪಟ್ಟಡ ಎಸ್. ಕಾರ್ಯಪ್ಪ ಅವರು ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೆ ಸೇರಿರುವ ಸ್ವಂತ ಜಾಗದ ನಡುವೆ ಸುಮಾರು 10 ಎಕರೆಯಷ್ಟು ಪೈಸಾರಿ ಜಾಗವಿದ್ದು, ಇದನ್ನು ಇವರುಗಳು ಕಳೆದ ಹಲವು ವರ್ಷಗಳ ಹಿಂದಿನಿಂದಲೇ ರೂಪಿತಗೊಳಿಸಿ ಅನುಭವ ಸ್ವಾಧೀನದಲ್ಲಿರಿ ಸಿಕೊಂಡಿದ್ದಾರೆ. ಈ ಜಾಗವನ್ನು ಅಧಿಕೃತವಾಗಿ ಮಂಜೂರು ಮಾಡಿಕೊಡುವಂತೆ ಈ ಹಿಂದೆಯೇ ಮನವಿ ಅರ್ಜಿ ಸಲ್ಲಿಸಿದ್ದರೂ ಇದಕ್ಕೆ ಸ್ಪಂಧÀನ ದೊರೆತಿಲ್ಲವೆನ್ನಲಾಗಿದೆ. ಈ ನಡುವೆ ಕಳೆದ ವರ್ಷ ಈ ಜಾಗದ ಸರ್ವೆ ನಡೆಸಿ ಸರಕಾರದ ಜಾಗ ಎಂದು ಗುರುತಿಸಲಾಗಿತ್ತು. ಇತ್ತೀಚೆಗೆ ದಿಢೀರನೆ ತಾಲೂಕು ತಹಶೀಲ್ದಾರ್ ಮಹದೇವಸ್ವಾಮಿ ಹಾಗೂ ಕಂದಾಯ ಇಲಾಖಾಧಿಕಾರಿಗಳ ತಂಡ ಇಲ್ಲಿಗೆ ಆಗಮಿಸಿ ಜಾಗ ತೆರವುಗೊಳಿಸಿ ಸುಪರ್ದಿಗೆ ಪಡೆಯಲು ಮುಂದಾಗಿತ್ತು. ಅಧಿಕಾರಿಗಳ ತಂಡ ಜೆಸಿಬಿ ಯಂತ್ರದೊಂದಿಗೆ ಆಗಮಿಸಿದ್ದು, ತಮ್ಮ ಜಾಗದ ಒಳ ಭಾಗದಿಂದ ಜೆಸಿಬಿ ಯಂತ್ರ ತರಬಾರದೆಂದು ನಿವೃತ್ತ ಅಧಿಕಾರಿಗಳು ಈ ಸಂದರ್ಭ ಆಕ್ಷೇಪಿಸಿ ಅಧಿಕಾರಿಗಳನ್ನು ಮಾತ್ರ ಒಳಬಿಟ್ಟು ಯಂತ್ರ ತರಲು ತಡೆ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ತಹಶೀಲ್ದಾರರು ಕರ್ತವ್ಯಕ್ಕೆ ಅಡ್ಡಿ ಎಂದು ದೂರು ನೀಡಿದ್ದು, ಕರುಂಬಯ್ಯ ಹಾಗೂ ಕಾರ್ಯಪ್ಪ ವಿರುದ್ಧ ವೀರಾಜಪೇಟೆ ಠಾಣೆಯಲ್ಲಿ ಸೆ. 353ರಂತೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿವಿಧ ಸಂಘ - ಸಂಸ್ಥೆಗಳ ಪ್ರಮುಖರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.