ಸುಂಟಿಕೊಪ್ಪ, ಜ. 2 : ಆಧುನಿಕ ಯುಗ ಯುವ ಜನಾಂಗವನ್ನು ಮಣ್ಣಿನ ಸಂಪರ್ಕದಿಂದ ದೂರ ಇಡುತ್ತಿದೆ. ಇದು ಯುವಕರ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಜ್ಞಾನ ಶಿಕ್ಷಣ ಮತ್ತು ತರಬೇತುದಾರೆ ಸಲೀಲಾ ಪಾಟ್ಕರ್ ಅಭಿಪ್ರಾಯ ಪಟ್ಟರು.ಬೋಯಿಕೇರಿಯಲ್ಲಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ವಾರ್ಷಿಕ ಎನ್‍ಎಸ್‍ಎಸ್ ಶಿಬಿರದಲ್ಲಿ ‘ಯುವ ಜನತೆಯಲ್ಲಿ ಕಣ್ಮರೆಯಾಗುತ್ತಿರುವ ವಿಜ್ಞಾನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ವಿಜ್ಞಾನ ಎಂಬದು ಕಬ್ಬಿಣದ ಕಡಲೆಯಲ್ಲ. ಅದೊಂದು ಜೀವನದ ವಿಧಾನವಾಗಿದೆ. ನಮ್ಮ ಜೀವನದ ಪ್ರತಿ ಹಂತದಲ್ಲೂ ವಿಜ್ಞಾನ ಇದೆ. ಯಾವದೇ ಸಾವಯವ ಕೃಷಿಯು ಸುಲಭ ಹಾದಿಯಲ್ಲ. ಅದು ನಿಧಾನ ಮತ್ತು ಸುಸ್ಥಿರ ಕೃಷಿ ಪದ್ಧತಿಯಾಗಿದೆ. ಅತಿಯಾದ ರಾಸಾಯನಿಕಗಳ ಬಳಕೆ ಹಾನಿಕರ. ಇವೆಲ್ಲವನ್ನು ವಿಜ್ಞಾನ ತಿಳಿಸುತ್ತದೆ. ಆದ್ದರಿಂದ ಯುವ ಜನಾಂಗ ವಿಜ್ಞಾನದಿಂದ ದೂರವಿರದೇ ಆದಷ್ಟು ಅದರ ಬಗ್ಗೆ ಅಧ್ಯಯನ ಮತ್ತು ತಿಳಿದುಕೊಳ್ಳುವದು ಸೂಕ್ತ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಮಡಿಕೇರಿ ದ್ವಾರಕದ ಸಮಾಜ ಸೇವಕ ಜಿ.ಟಿ. ರಾಘವೇಂದ್ರ “ಆಧ್ಯಾತ್ಮಿಕತೆ ಮತ್ತು ಯುವ ಜನತೆ” ಕುರಿತು ಉಪನ್ಯಾಸ ನೀಡಿದರು. ಸಮಸ್ಯೆಗಳು ಬಂದಾಗ ಅದಕ್ಕೆ ಬೆನ್ನು ಹಾಕುವದು ಹೇಡಿಗಳ ಲಕ್ಷಣ. ಭಗವದ್ಗೀತೆ ಪ್ರತಿಪಾದಿಸುವ ನಿಸ್ವಾರ್ಥ ಸೇವೆ, ಪ್ರೇಮ, ಕರ್ತವ್ಯ ಪ್ರಜ್ಞೆಗಳನ್ನು ಆಧುನಿಕ ಜನಾಂಗ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿಯ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ದಿನೇಶ್ ವಹಿಸಿದ್ದರು. ವೇದಿಕೆಯಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಾಂತಿ ಸುಂದರಿ, ಟಿ.ಬಿ. ಓಮನಾ, ಬೊಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಜಯಾ, ಪಿ.ಎಸ್. ಲೀಲಾವತಿ, ಶಿಬಿರಾಧಿಕಾರಿ ಬಿ.ಆರ್. ಶಶಿಧರ್ ಇದ್ದರು.