ಮಡಿಕೇರಿ, ಸೆ. 16: ಹಿಂದೂ ಸಂಪ್ರದಾಯದ ಹೊಸ ವರ್ಷವೆಂದೇ ಹೇಳಲಾಗುವ ಯುಗಾದಿ ಹಬ್ಬದ ಸಿಹಿ ತಿನಿಸುಗಳು, ಕೃಷಿಕರ ಹಬ್ಬವಾಗಿರುವ ಕೈಲ್ ಮುಹೂರ್ತದ ಸಂಭ್ರಮ ಇಂದು ಕಂಡು ಬಂದಿತು. ಬಾಯಲ್ಲಿ ನೀರೂರಿಸುವ ಪದಾರ್ಥಗಳು ಗಮನ ಸೆಳೆದವು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗೌಡ ಸಮಾಜದ ಸಹಯೋಗದೊಂದಿಗೆ ನಡೆಯುತ್ತಿರುವ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡುಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿಂದು ಚೇರಂಬಾಣೆಯ ಕಡ್ಲೇರ ತುಳಸಿ ಮೋಹನ್ ನೇತೃತ್ವದ ತಂಡದವರು ಯುಗಾದಿ ಹಬ್ಬದಲ್ಲಿ ಸವಿಯುವ ತಿನಿಸುಗಳನ್ನು ಮಾಡಿದರು. ಬೇವು - ಬೆಲ್ಲ, ಪಾಯಸ, ಹೋಳಿಗೆ, ಹಪ್ಪಳ, ಖಾರರೊಟ್ಟಿ ವಿಶೇಷವಾಗಿ ದಾಸವಾಳ ಹೂವಿನ ಗೊಜ್ಜು ಗಮನ ಸೆಳೆಯಿತು.

ನಿನ್ನೆಯ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ ಜವಾಬ್ದಾರಿ ನಿರ್ವಹಿಸಿದ ಹೊಸ್ಕೇರಿ ಗ್ರಾಮದ ತಂಡದವರು ಸುಮಾರು 72ಕ್ಕೂ ಅಧಿಕ ಖಾದ್ಯಗಳನ್ನು ತಯಾರಿಸಿದ್ದರೆ, ಇಂದು ಕಟ್ಟೆಮಾಡು ತಂಡದವರು ಅತಿಥಿ ಸತ್ಕಾರದ ನೇತೃತ್ವ ವಹಿಸಿದ್ದರು. ಕೈಲ್ ಮುಹೂರ್ತ ಹಬ್ಬದಡುಗೆ ಇಂದಿನ ವಿಶೇಷವಾಗಿತ್ತು. ಸಾಂಪ್ರದಾಯಿಕವಾಗಿ ನೇಗಿಲಿಗೆ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮವನ್ನು ಆರಂಭಿಸಿದರು.

ಬೆಂಕಿಯಲ್ಲಿ ಸುಟ್ಟ ಹಂದಿ, ಕೋಳಿ ಮಾಂಸ, ಅಣಬೆ ಸಾರು, ಕೋಳಿ ಸಾರು, ಇಡ್ಲಿ, ಪಾಪಿಟ್ಟು, ವಿಶೇಷವಾಗಿ ನೇಗಿಲು ಹಿಟ್ಟು, ಕೊಯಿಲೆ ಮೀನು ಚಟ್ನಿ, ರೊಟ್ಟಿ, ಪಾಯಸ ಸೇರಿದಂತೆ ಆಟಿ ಸೊಪ್ಪಿನ ಹಲ್ವ, ಬರ್ಫಿ ಎಲ್ಲರ ಬಾಯಲ್ಲಿ ನೀರೂರಿಸಿತು. ತಂಗಳನ್ನದಲ್ಲಿ ತಯಾರಿಸಿದ ವಿವಿಧ ಖಾದ್ಯಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಕಾರ್ಯಕ್ರಮ ಸಂಚಾಲಕ ಮಂದ್ರೀರ ಮೋಹನ್‍ದಾಸ್ ಇನ್ನಿತರರು ಪಾಲ್ಗೊಂಡಿದ್ದರು. 400ಕ್ಕೂ ಅಧಿಕ ಮಂದಿ ಭಾಗವಹಿಸಿ ವಿಶೇಷ ತಿನಿಸುಗಳ ಸವಿಯುಂಡರು. ಕಟ್ಟೆಮನೆ ಸೊನಾಜಿತ್ ಕಾರ್ಯಕ್ರಮ ನಿರ್ವಹಿಸಿದರು.

ಪೂರ್ವಭಾವಿ ಸಭೆ

ತಾ. 18 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಇಂದು ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮಕ್ಕೆ ಮರಗೋಡು, ಹೊಸ್ಕೇರಿ, ಐಕೊಳ, ಕಟ್ಟೆಮಾಡು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಗೌಡ ಸಮಾಜದವರು ಕೂಡ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.