ಶ್ರೀಮಂಗಲ, ಸೆ. 8 : ತಮಿಳುನಾಡಿಗೆ ನೀರು ಬಿಡುವದರಿಂದ ರಾಜ್ಯದ ರೈತರಿಗಾಗುವ ಅನ್ಯಾಯದ ವಿರುದ್ಧ ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ, ಯುಕೊ ಸಂಘಟನೆಯ ನೇತೃತ್ವದಲ್ಲಿ ತಾ.10 ರಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಚಾಲಕ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.ಪೊನ್ನಂಪೇಟೇಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯಕ್ಕೆ ಈ ದುಸ್ಥಿತಿ ಬರುತ್ತದೆ ಎಂಬ ಮುನ್ಸೂಚನೆಯನ್ನು, ಕಳೆದ ವರ್ಷ ಯಕೊ ಸಂಘಟನೆಯು ಕಾವೇರಿಯ ಉಗಮ ಸ್ಥಾನ ತಲಕಾವೇರಿಯಿಂದ ಬೆಂಗಳೂರಿನವರೆಗೆ 414 ಕಿ.ಮಿ.ಯ ಜಬ್ಬೂಮಿ ಬಾಳೊ ಪಾದಯಾತ್ರೆಯ ಮೂಲಕ ಜನಜಾಗೃತಿಯೊಂದಿಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ಸಂದರ್ಭ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾವೇರಿ ನದಿನೀರಿನ ಕುಂಠಿತ ಹಾಗೂ ಅದರ ಪರಿಣಾಮಗಳ ಕುರಿತಂತೆ ಮನವರಿಕೆ ಮಾಡಿಕೊಡ ಲಾಗಿತ್ತಲ್ಲದೇ, ಅವುಗಳ ಪುನಶ್ಚೇತನಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿಯೂ ವಿವರಿಸ ಲಾಗಿತ್ತಾದರೂ ಸರ್ಕಾರ ಈ ನಿಟ್ಟಿನಲ್ಲಿ ಯಾವದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಬಿಕ್ಕಟ್ಟು ಉಲ್ಬಣ ಗೊಂಡಿದ್ದು, ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸುವ ಅಪಾಯವಿದೆ. ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾದಲ್ಲಿ ಸರ್ಕಾರ ಯುಕೊ ಮುಂದಿಟ್ಟ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರುವದೊಂದೇ ಏಕೈಕ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಪರಿಸರ ನಾಶವಾಗಿದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ರಸ್ತೆ ಅಗಲೀಕರಣ, ಹೈಟೆನ್ಶನ್ ವಿದ್ಯುತ್ ಮಾರ್ಗ, ನೈಸರ್ಗಿಕ ಅರಣ್ಯದಲ್ಲಿ, ಕೆಲವು ಜಾತಿಯ ಮರಗಳನ್ನು ಕಡಿಯಲು ಸರ್ಕಾರದ ಅನುಮತಿ, ಹಾಗು ಅವೈಜ್ಞಾನಿಕವಾಗಿ ಪ್ರಭಾವಿಗಳಿಗೆ ರೆಸಾರ್ಟ್ ನಿರ್ಮಿಸಲು ಅನುಮತಿ ನೀಡಿರುವದರಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮರಗಳು ನಾಶವಾಗಿದ್ದು, ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ. ಇದರ ಪರಿಣಾಮವನ್ನು ಇದೀಗ ರೈತರು ಹಾಗು ರಾಜ್ಯದ ಜನತೆ ಎದುರಿಸು ವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದಲ್ಲದೆ, ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಏಕರೆ ಕೃಷಿ ಜಮೀನು, ವಾಣಿಜ್ಯ ಉದ್ಧೇಶಗಳಿಗೆ ಭೂ ಪರಿವರ್ತನೆ ಗೊಂಡಿದ್ದು ಮಾತ್ರವಲ್ಲದೆ ಸಾವಿರಾರು ಹೆಕ್ಟೇರ್ ಕೃಷಿ ಜಮೀನು ಪಾಳುಬಿದ್ದಿವೆ. ಇವುಗಳಲ್ಲಿ ಮಳೆ ನೀರು ಇಂಗುವಿಕೆ ಕಡಿಮೆಯಾಗಿರುವದೇ ಇಂದಿನ ಈದುಸ್ಥಿತಿಗೆ ಕಾರಣ ಎಂದು ಅವರು ಕಿಡಿಕಾರಿದರು.
ಈ ಎಲ್ಲಾ ದೃಷ್ಟಿಯಿಂದ ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ, ಯುಕೊ ನೇತೃತ್ವದಲ್ಲಿ ಕೊಡಗು, ಮೈಸೂರು ಹಾಗು ಬೆಂಗಳೂರು ಗಳಲ್ಲಿ ನೆಲೆಸಿರುವ ಕೊಡವರು ತಾ.10 ರಂದು ಮಂಡ್ಯಕ್ಕೆ ತೆರಳಿ ಶಾಂತಿಯುತ ಪ್ರತಿಭಟನೆ ನಡೆಸುವದರ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಈ ಸಂದರ್ಭ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ ಹಾಗು ನೆಲ್ಲಮಕ್ಕಡ ಮಾದಯ್ಯ ಹಾಜರಿದ್ದರು.