ಮಡಿಕೇರಿ, ಸೆ. 28: ವಿದ್ಯಾರ್ಥಿಗಳಿಗೆ ಯಾಂತ್ರಿಕವಾಗಿ ಪಾಠ ಮಾಡುವದಕ್ಕಿಂತ ಅವರನ್ನು ಅರ್ಥೈಸಿಕೊಂಡು ಬೋಧಿಸುವದು ಅಧ್ಯಾಪಕರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಪಟ್ಟರು.
ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ಏರ್ಪಡಿಸಿದ್ದ ‘ಅಧ್ಯಾಪಕರ ಜಾಗೃತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೆಲೆರಿಯಾ ಸಿಕ್ವೇರ, ಎಸ್.ಜೆ. ವೇಣುಗೋಪಾಲ್ ಹಾಗೂ ಪಿ.ವಿ. ರಾಂದಾಸ್ ಶಿಬಿರ ನಡೆಸಿದರು. ಜಿಲ್ಲೆಯ ವಿವಿಧೆಡೆಯ ಸುಮಾರು ಅರವತ್ತು ಅಧ್ಯಾಪಕರುಗಳು ಭಾಗವಹಿಸಿದ್ದು, ಮಕ್ಕಳನ್ನು ತಿದ್ದುವ ಮೊದಲು ತಮ್ಮನ್ನು ತಿದ್ದಿಕೊಳ್ಳುವದು, ತಮ್ಮನ್ನು ಅರಿತುಕೊಳ್ಳುವದು, ಮಕ್ಕಳ ಮನೋಭಾವ ಅರಿತು ನಡೆಯುವದು, ಪರೀಕ್ಷೆಯ ಹೊರತಾದ ನಾಗರಿಕ ಶಿಕ್ಷಣ, ಆತ್ಮವಿಶ್ವಾಸ ತುಂಬುವ ವಿಚಾರಗಳನ್ನು ಮನದಟ್ಟು ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಡಿಡಿಪಿಐ ಜಿ.ಆರ್. ಬಸವರಾಜು ಮಾತನಾಡಿ, ಇಂದಿನ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಿಳಿಯಬೇಕಾದ ಎಲ್ಲಾ ವಿದ್ಯೆಯೂ ಅಡಕವಾಗಿದ್ದು, ಅಧ್ಯಾಪಕರು ತಮ್ಮ ಜವಾಬ್ದಾರಿಯನ್ನು ಭಕ್ತಿ ಪೂರ್ವಕವಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವಂತಾಗಬೇಕೆಂದರು.
ರೋಟರಿಯ ಟೀಚ್ ವಿಭಾಗವೊಂದರ ಜಿಲ್ಲಾಧ್ಯಕ್ಷ ಬಿ.ಜಿ. ಅನಂತ ಶಯನ ಮಾತನಾಡಿ, 2020ರೊಳಗೆ ಭಾರತವನ್ನು ಅಕ್ಷರಸ್ಥ ರಾಷ್ಟ್ರವನ್ನಾಗಿಸುವ ಪಣವನ್ನು ರೋಟರಿ ತೊಟ್ಟಿದ್ದು, ಶಾಲೆಗಳು ಮತ್ತು ಅಧ್ಯಾಪಕರ ಸಹಕಾರ ಅಗತ್ಯ ಎಂದರು. ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್, ಕಾರ್ಯದರ್ಶಿ ಡಾ. ನವೀನ್, ಸದಸ್ಯರುಗಳಾದ ಸಂದೀಪ್, ಮೋಹನ್ ಪ್ರಭು, ಚೇತನ್, ವಿನೋದ್ ಹಾಜರಿದ್ದರು.