ಸೋಮವಾರಪೇಟೆ, ಜ. 24: ತಾಲೂಕಿನ ಯಡವನಾಡು ಗ್ರಾಮದ ಒಳಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯರ ಅಹವಾಲನ್ನು ಆಲಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖುದ್ದು ತೆರಳಿ ರಸ್ತೆ ದುರವಸ್ಥೆಯನ್ನು ಪರಿಶೀಲಿಸಿದರು.ಯಡವನಾಡು -ಹಾರಂಗಿ ರಸ್ತೆ ಸೇರಿದಂತೆ ಗ್ರಾಮದೊಳಗಿನ ಬಹುತೇಕ ಎಲ್ಲಾ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು, ವಾಹನಗಳಿರಲಿ; ಪಾದಚಾರಿಗಳು ನಡೆದಾಡಲೂ ಕಷ್ಟಕರವಾಗಿದೆ. ಕಳೆದ ಅನೇಕ ದಶಕಗಳಿಂದ ಅವ್ಯವಸ್ಥೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಎಪಿಎಂಸಿ ನಿರ್ದೇಶಕ ಪೊನ್ನಪ್ಪ ಅವರುಗಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿದರಲ್ಲದೆ, ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಅಭಿಯಂತರ ಧರ್ಮರಾಜು ಹಾಗೂ ಇತರ ಅಧಿಕಾರಿಗಳಿಗೆ ರಸ್ತೆ ಅವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಮನವಿ ಆಲಿಸಿದ ಅಭಿಯಂತರ ಧರ್ಮರಾಜು ಅವರು, ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಸೆಳೆಯ ಲಾಗುವದು. ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಇಲಾಖೆಯಿಂದ ಅಗತ್ಯ ಅನುದಾನ ಬಿಡುಗಡೆಗೆ ವರದಿ ನೀಡಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭ ಗ್ರಾಮಸ್ಥರಾದ ಪ್ರಶಾಂತ್, ಸುನಿಲ್, ನವೀನ್, ಶೇಖರ್, ಸಂದೇಶ್ ಧನು, ಮನು. ಜೋಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.