ಸೋಮವಾರಪೇಟೆ / ಕೂಡಿಗೆ, ಅ. 20: ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಗಿರಿಜನ ಮಹಿಳೆಯೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ತಾಲೂಕಿನ ಯಡವನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಯಡನವಾಡು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಸೂಳೆಬಾವಿ ಗಿರಿಜನ ಹಾಡಿ ನಿವಾಸಿ ಪಾರ್ವತಿ (65) ಎಂಬವರೇ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದವರಾಗಿದ್ದು, ಇವರೊಂದಿಗಿದ್ದ ಈರ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ಯಡವನಾಡು ಮುಖ್ಯರಸ್ತೆಯಿಂದ ಅರಣ್ಯದಂಚಿನ ಮಾರ್ಗದಲ್ಲಿ ಹಾಡಿಗೆ ತೆರಳುತ್ತಿದ್ದ ಸಂದರ್ಭ ಕಾಡಾನೆ ದಿಢೀರ್ ಧಾಳಿ ನಡೆಸಿದೆ. ವೃದ್ದೆ ಪಾರ್ವತಿ ಅವರು ಓಡಿ ತಪ್ಪಿಸಿಕೊಳ್ಳುವ ಭರದಲ್ಲಿ ಆಯತಪ್ಪಿ ಕೆಳಬಿದ್ದಿದ್ದು, ಇವರ ಎಡಭಾಗದ ತೊಡೆಗೆ ತುಳಿದಿದೆ. ಪರಿಣಾಮ ತೊಡೆ ಭಾಗದ ಮೂಳೆ ಹೊರಬಂದು ತೀವ್ರ ರಕ್ತಸ್ರಾವವಾಗಿದೆ.
ತಕ್ಷಣ ಪಾರ್ವತಿ ಅವರನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರೊಳಗೆ ಪ್ರಾಣ ಪಕ್ಷಿ ಹಾರಿದೆ. ಇವರೊಂದಿಗಿದ್ದ ಅಕ್ಕಯ್ಯ ಎಂಬ ಮಹಿಳೆಯೂ ಕಾಡಾನೆ ಧಾಳಿಯಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಕೆಳಬಿದ್ದು, ಸೊಂಟದ ಭಾಗಕ್ಕೆ ಪೆಟ್ಟಾಗಿದೆ. ಮೃತ ಪಾರ್ವತಿ ಅವರ ಮರಣೋತ್ತರ ಪರೀಕ್ಷೆಯನ್ನು ಕುಶಾಲನಗರ ಆಸ್ಪತ್ರೆಯಲ್ಲಿ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಘಟನಾ ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮೊಹಿಸೀನ್ ಬಾಷ, ಡಿಆರ್‍ಎಫ್‍ಓ ಫಿರೋಜ್ ಖಾನ್, ಅರಣ್ಯ ರಕ್ಷಕ ಹರೀಶ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯಿಂದ ಮೃತ ಪಾರ್ವತಿ ಅವರ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಿಸಲಾಗಿದ್ದು, ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಇಲಾಖೆಯಿಂದ 5 ಸಾವಿರ ನೀಡಿದ್ದು, 2ಲಕ್ಷ ಪರಿಹಾರ ಧನ ಚೆಕ್ ಹಸ್ತಾಂತರಿಸಲಾಗಿದೆ. ಉಳಿದ 3 ಲಕ್ಷದ ಚೆಕ್‍ನ್ನು ಮುಂದಿನ 10 ದಿನಗಳ ಒಳಗೆ ನೀಡಲಾಗುವದು ಎಂದು ಅಧಿಕಾರಿ ಮೊಹಿಸೀನ್ ಬಾಷ ತಿಳಿಸಿದ್ದಾರೆ.