ಮಡಿಕೇರಿ, ಡಿ. 17: ಅಕ್ಟೋಬರ್ ಹದಿನಾಲ್ಕರಂದು ಟಿಂಬರ್ ಹೊತ್ತ ಬೃಹತ್ ಲಾರಿಯೊಂದು ಕಡಗದಾಳು - ಮೋದೂರು ರಸ್ತೆಯಲ್ಲಿ ಚಲಿಸುತ್ತಿತ್ತು. ತಿರುವು ಒಂದರಲ್ಲಿ ಆಯತಪ್ಪಿದ ಲಾರಿ ರಸ್ತೆ ಬದಿಯ ತಡೆಗೋಡೆ ಸಹಿತ ಪ್ರಪಾತಕ್ಕೆ ಉರುಳಿ ಬಿತ್ತು. ಆಶ್ಚರ್ಯ ರೀತಿಯಲ್ಲಿ ಲಾರಿಯ ಚಾಲಕ-ಕ್ಲೀನರ್ ಯಾವದೇ ಅಪಾಯವಿಲ್ಲದೆ ಎದ್ದು ಬಂದರು.

ಮೋದೂರು ರಸ್ತೆಯ ಈ ತಿರುವು ಮೊದಲೇ ಅಪಾಯಕಾರಿಯಾಗಿತ್ತು. ಇದೀಗ ತಡೆಗೋಡೆಯೂ ಕುಸಿದು ತೀವ್ರ ಅಪಾಯ ಎದುರಾಗಿದೆ. ಈಗಲೇ ಅಷ್ಟಷ್ಟು ಮಣ್ಣು ಕುಸಿಯಲು ಆರಂಭವಾಗಿದ್ದು, ರಸ್ತೆ ಕಿರಿದಾಗುತ್ತಿದೆ. ಮಳೆಗೆ ಮುನ್ನ ಭದ್ರ ತಡೆಗೋಡೆ ನಿರ್ಮಿಸದಿದ್ದಲ್ಲಿ ರಸ್ತೆ ಸಂಪೂರ್ಣ ಕುಸಿದು ಮೋದೂರು ಸಂಪರ್ಕ ಕಡಿದುಕೊಳ್ಳಲಿದೆ ಎಂದು ಅಲ್ಲಿನ ನಿವಾಸಿಗಳಾದ ನಕುಲ್ ಪೂಣಚ್ಚ, ಬಿ.ಜಿ. ಮುತ್ತಣ್ಣ, ಶಿವಶಂಕರ್ ಹಾಗೂ ಇತರರು ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಪ್ರಬಾರ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸುವಂತೆ ಗ್ರಾಮಸ್ಥರು ಕೋರಿದ್ದಾರೆ. ದಿನಂಪ್ರತಿ ಶಾಲಾ ಮಕ್ಕಳು, ತೋಟ ಕಾರ್ಮಿಕರನ್ನು ಹೊತ್ತ ವಾಹನಗಳು, ಕಾಫಿ ಸಾಗಾಟ ಮಾಡುವ ಜೀಪು-ಲಾರಿಗಳು ಓಡಾಡುವದರಿಂದ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.