ನಾಪೆÇೀಕ್ಲು, ಆ. 9: ಸರಕಾರ ಮೋಡ ಬಿತ್ತನೆ ಮಾಡಲು ಉದ್ದೇಶಿಸಿರುವದನ್ನು ಕೂಡಲೇ ಕೈಬಿಡಬೇಕೆಂದು ಕಕ್ಕಬ್ಬೆ ಫಾರ್ಮರ್ಸ್ ಕ್ಲಬ್ ಸಭೆಯಲ್ಲಿ ವಿರೋಧಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್ನ ಅಧ್ಯಕ್ಷ ಕೋಟೆರ ಸುರೇಶ್ ಚಂಗಪ್ಪ ಈ ವ್ಯಾಪ್ತಿಯಲ್ಲಿ ಮಳೆ ಹೆಚ್ಚು ಬೀಳುವ ಕಾರಣ ತೇವಾಂಶ ಹೆಚ್ಚಾಗಿ ಕಾಫಿ, ಕಾಳುಮೆಣಸು, ಅಡಿಕೆ ಮತ್ತಿತರ ಬೆಳೆಗಳ ಫಸಲು ನಾಶಗೊಳ್ಳುತ್ತಿದೆ. ಮೋಡ ಬಿತ್ತನೆಯಿಂದ ಸುರಿಯುವ ಮಳೆಯು ರೈತರ ಬದುಕನ್ನು ಅತಂತ್ರಗೊಳಿಸುತ್ತದೆ. ಸರಕಾರ ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಮೋಡ ಬಿತ್ತನೆಯಿಂದ ಸುರಿಯುವ ಮಳೆಯಲ್ಲಿ ರಾಸಾಯನಿಕದ ಅಂಶ ಇರುವದರಿಂದ ಮನುಷ್ಯರು, ಪ್ರಾಣಿಗಳು, ಸಸ್ಯ ವರ್ಗದ ಮೇಲೆ ಮಾರಕ ಪರಿಣಾಮ ಉಂಟಾಗುವ ಅಪಾಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವದು. ಇದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗುವದು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯದರ್ಶಿ ಅನ್ನಾಡಿಯಂಡ ದಿಲೀಪ್ ಕುಮಾರ್, ಪದಾಧಿಕಾರಿಗಳು, ಸದಸ್ಯರು ಇದ್ದರು.